ಬೈಕ್ ಕಳವು: ಆರೋಪಿಗಳಿಬ್ಬರ ಬಂಧನ

ಮಂಗಳೂರು, ಫೆ. 3: ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದಿಂದ ಕಳವು ಮಾಡಿದ ಬೈಕನ್ನು ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ಗ್ರಾಮದ ಪರಸಾಪುರ ಗ್ರಾಮದ ನಿವಾಸಿಗಳಾದ ಸುರೇಶ್ ಭಜಂತ್ರಿ (21) ಹಾಗೂ ಫಕಿರೇಶ್ ಈಳಿಗೇರ (23) ಬಂಧಿತ ಆರೋಪಿಗಳು.
ಆರೋಪಿಗಳಿಂದ 55 ಸಾವಿರ ರೂ. ಮೌಲ್ಯದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಆರೋಪಿಗಳು ಬೈಕ್ ಬಳಿ ನಿಂತಿದ್ದಾಗ ಪೊಲೀಸರು ಅವರ ಬಳಿ ತೆರಳಿದ್ದ ಸಂದರ್ಭದಲ್ಲಿ ಅವರು ಓಡಿ ಹೋಗಲು ಯತ್ನಿಸಿದ್ದಾರೆ. ಬೈಕ್ ಬಗ್ಗೆ ವಿಚಾರಿಸಿದಾಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿರುವ ದಯಾ ವೈನ್ ಶಾಪ್ ಬಳಿಯಿಂದ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬೈಕ್‌ನ ನೋಂದಣಿ ಸಂಖ್ಯೆಯನ್ನು ಬದಲಾಯಿಸಿ ಅಲ್ಲಿಂದ ಚಲಾಯಿಸಿಕೊಂಡು ಬಂದು ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಪಿ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಬರ್ಕೆ ಇನ್‌ಸ್ಪೆಕ್ಟರ್ ರಾಜೇಶ್ ಎ.ಕೆ.ಅವರ ನೇತೃತ್ವದಲ್ಲಿ ಬರ್ಕೆ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ನರೇಂದ್ರ, ಎಎಸ್‌ಐ ಪ್ರಕಾಶ್ ರೈ ಹಾಗೂ ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಕೋಟ್ಯಾನ್, ಜಯರಾಜ್, ಕಿಶೋರ್ ಪೂಜಾರಿ, ನಾಗರಾಜ,ಮಹೇಶ್ ಪಾಟೀಲ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





