ಫೆ.20: ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು

ಹೊಸದಿಲ್ಲಿ, ಫೆ.3: ಹತ್ತನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಫೆ.20ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಐಪಿಎಲ್ ಟ್ವಿಟರ್‌ನಲ್ಲಿ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಈ ಮೊದಲು ಆಟಗಾರರ ಹರಾಜು ಪ್ರಕ್ರಿಯೆಯನ್ನು ಫೆ.4ಕ್ಕೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ದಿನಾಂಕವನ್ನು ಮುಂದೂಡಲಾಗಿದ್ದು, ಬೆಂಗಳೂರಿನ ಸ್ಟಾರ್ ಹೊಟೇಲ್‌ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 750ಕ್ಕೂ ಅಧಿಕ ಆಟಗಾರರು ಹರಾಜುಗೊಳ್ಳಲಿದ್ದಾರೆ.
ಈ ವರ್ಷದ ಐಪಿಎಲ್‌ಗೆ ಆಟಗಾರರ ಹರಾಜು ಕಾರ್ಯಕ್ರಮ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಗೊಳ್ಳಲಿದೆ ಎಂದು ವರದಿಯಾಗಿತ್ತು. ಐಪಿಎಲ್ ಆಯೋಜಕರು ಟ್ವಿಟರ್‌ನ ಮೂಲಕ ಹರಾಜಿನ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವುದರೊಂದಿಗೆ ಎಲ್ಲ ಗೊಂದಲಕ್ಕೆ ತೆರೆ ಎಳೆದರು.
ಆಟಗಾರರ ಹರಾಜು ಪ್ರಕ್ರಿಯೆ ಕೊನೆಗೊಂಡ ಬಳಿಕ ಮರುದಿನ ಎಲ್ಲ ಫ್ರಾಂಚೈಸಿಗಳು ದಿನಪೂರ್ತಿ ಕಾರ್ಯಾಗಾರವನ್ನು ನಡೆಸಲಿವೆ ಎಂದು ಬಿಸಿಸಿಐ ಘೋಷಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಗರಿಷ್ಠ ಮೊತ್ತ (23.35 ಕೋ. ರೂ.)ಉಳಿಸಿಕೊಂಡಿದೆ. ಡೆಲ್ಲಿ ಡೇರ್‌ಡೆವಿಲ್ಸ್(23.1 ಕೋ.ರೂ.) 2ನೆ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್(11.55 ಕೋ.ರೂ.) ಕಡಿಮೆ ಮೊತ್ತ ಹೊಂದಿದೆ. ಬಿಸಿಸಿಐ 2016ರ ಡಿ.19 ರಂದು ಆಯಾ ತಂಡಗಳು ತಮ್ಮಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.
2017ರ ಐಪಿಎಲ್ ಟೂರ್ನಿಯು ಎಪ್ರಿಲ್ 5 ರಿಂದ ಆರಂಭವಾಗಲಿದ್ದು, ಮೇ 21ಕ್ಕೆ ಫೈನಲ್ ಪಂದ್ಯ ನಡೆಯುವುದು.







