ಆದಾಯ ಹಂಚಿಕೆ ಸೂತ್ರ ವಿರೋಧಿಸುತ್ತೇವೆ: ಪಿಸಿಬಿ ಅಧ್ಯಕ್ಷ ಖಾನ್

ಕರಾಚಿ, ಫೆ.3: ‘‘ದುಬೈನಲ್ಲಿ ನಡೆಯಲಿರುವ ಐಸಿಸಿ ಮಂಡಳಿ ಸಭೆಯಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸುವುದಲ್ಲದೆ, ತ್ರಿಶಕ್ತಿ ಕೇಂದ್ರಿತ ಆಡಳಿತ ಪದ್ಧತಿ ಹಾಗೂ ಆದಾಯ ಹಂಚಿಕೆ ಸೂತ್ರವನ್ನು ವಿರೋಧಿಸುತ್ತೇನೆ’’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್‌ಖಾನ್ ಹೇಳಿದ್ದಾರೆ.
‘‘ನಾವು ಬಿಗ್‌ತ್ರಿ ಆಡಳಿತ ವ್ಯವಸ್ಥೆ ಹಾಗೂ ಆದಾಯ ಹಂಚಿಕೆ ಸೂತ್ರವನ್ನು ರದ್ದುಪಡಿಸಬೇಕೆಂದು ಆಗ್ರಹಿಸಲಿದ್ದೇವೆ. ಇದನ್ನು ರದ್ದುಪಡಿಸಲು ಐಸಿಸಿಗೆ ಯಾವುದೇ ಸಾಂವಿಧಾನಿಕ ಸಮಸ್ಯೆಗಳಿಲ್ಲ’’ ಎಂದು ದುಬೈಗೆ ತೆರಳುವ ಮೊದಲು ಸುದ್ದಿಗಾರರಿಗೆ ಖಾನ್ ತಿಳಿಸಿದರು.
‘‘ಭಾರತ ತಮ್ಮಂದಿಗೆ 2015 ಹಾಗೂ 2023ರ ನಡುವೆ ಆರು ದ್ವಿಪಕ್ಷೀಯ ಸರಣಿ ಆಡುತ್ತೇವೆಂದು ಒಪ್ಪಂದಕ್ಕೆ ಸಹಿ ಹಾಕಿರುವ ಕಾರಣ 2014ರಲ್ಲಿ ಬಿಗ್ ತ್ರಿ ಆಡಳಿತ ಪದ್ಧತಿಯನ್ನು ಪಾಕಿಸ್ತಾನ ಬೆಂಬಲಿಸಿತ್ತು. ಆದರೆ, ಭಾರತ ಒಪ್ಪಂದದಂತೆ ನಡೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಹಿಂದಿನ ನೀತಿಯನ್ನು ಅನುಸರಿಸುವುದಿಲ್ಲ’’ ಎಂದು ಖಾನ್ ಸ್ಪಷ್ಟಪಡಿಸಿದರು.
ಬಿಗ್ ತ್ರಿ ಆಡಳಿತ ಪದ್ಧತಿಯ ಪ್ರಕಾರ ಭಾರತ, ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಐಸಿಸಿ ಆಯೋಜಿತ ಟೂರ್ನಿಯಲ್ಲಿ ಪ್ರಸಾರ ಹಕ್ಕಿನಿಂದ ಬರುವ ಆದಾಯದ ಹೆಚ್ಚಿನ ಭಾಗವನ್ನು ಪಡೆಯಲು ಅರ್ಹತೆ ಹೊಂದಿವೆ.







