ಅಧಿಕಾರಿಗಳಿಂದ ನೆರವು ನಿರಾಕರಣೆ:ತಾಯಿಯ ಶವವನ್ನು ಹೊತ್ತು ಹಿಮದ ರಾಶಿಯಲ್ಲಿ 50 ಕಿ.ಮೀ.ನಡೆದ ಕಾಶ್ಮೀರಿ ಯೋಧ

ಪಠಾಣ್‌ಕೋಟ್,ಫೆ.3: ಆ ಕಾಶ್ಮೀರಿ ಯೋಧನ ತಾಯಿ ಸತ್ತು ಹೋಗಿದ್ದಳು. ತಾಯಿಯ ಅಂತ್ಯಸಂಸ್ಕಾರವನ್ನು ಸ್ವಗ್ರಾಮದಲ್ಲಿ ನೆರವೇರಿಸಲು ಬಯಸಿದ್ದ ಯೋಧನಿಗೆ ಹೆಲಿಕಾಪ್ಟರ್ ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಆ ಭರವಸೆ ಭರವಸೆಯಾಗಿಯೇ ಉಳಿದಾಗ ಆರು ದಿನಗಳ ಹಿಂದೆ ಕೊನೆಯುಸಿರೆಳೆದಿದ್ದ ತಾಯಿಯನ್ನು ಹೊತ್ತುಕೊಂಡು ಆತ ಆರು ಅಡಿ ಎತ್ತರದ ಹಿಮದ ರಾಶಿಯಲ್ಲಿ ಬರೋಬ್ಬರಿ 50 ಕಿ.ಮೀ.ನಡೆದು ತಾಯಿಯ ಋಣವನ್ನು ತೀರಿಸಿದ್ದಾನೆ. ಬಂಧುಗಳೂ ಆತನೊಂದಿಗೆ ಸಹಕರಿಸಿದ್ದರು.
ಮೊಹಮ್ಮದ್ ಅಬ್ಬಾಸ್(25) ಪಠಾಣ್‌ಕೋಟ್‌ನಲ್ಲಿ ವಾಸವಾಗಿದ್ದು, ತಾಯಿ ಸಕೀನಾ ಬೇಗಂ ಕೂಡ ಜೊತೆಯಲ್ಲಿದ್ದಳು. ಆರು ದಿನಗಳ ಹಿಂದೆ ಆಕೆ ನಿಧನಳಾಗಿದ್ದಳು. ಭಾರೀ ಹಿಮಪಾತದಿಂದ ಕುಪ್ವಾರಾದಿಂದ ಆತನ ಸ್ವಗ್ರಾಮ ಕರ್ನಾವನ್ನು ಸಂಪರ್ಕಿಸುವ ರಸ್ತೆ ಮುಚ್ಚಿಹೋಗಿತ್ತು. ಹೆಲಿಕಾಪ್ಟರ್ ಒದಗಿಸುವ ಅಧಿಕಾರಿಗಳ ಭರವಸೆ ಸುಳ್ಳಾದಾಗ ಹೆಗಲ ಮೇಲೆ ಹೊತ್ತುಕೊಂಡೇ ಸ್ವಗ್ರಾಮಕ್ಕೆ ತಾಯಿಯ ಶವವನ್ನು ಸಾಗಿಸಲು ನಿರ್ಧರಿಸಿದ್ದ. ಆತ ಮತ್ತು ಬಂಧುಗಳು ಸಕೀನಾಳ ಶವವನ್ನು ಬಿದಿರನ ಅಟ್ಟಣಿಗೆಯಲ್ಲಿ ಹೊತ್ತುಕೊಂಡು ಸಾಗಿಸುತ್ತಿದ್ದಾಗ ಗ್ರಾಮಸ್ಥರು ಹಿಮದ ರಾಶಿಗಳನ್ನು ಸರಿಸುವ ಮೂಲಕ ತಮ್ಮ ಕೈಲಾದಷ್ಟು ಸಹಾಯ ನೀಡಿದ್ದರು.
ಸುದೀರ್ಘ,ಶ್ರಮದಾಯಕ ನಡಿಗೆಯ ಬಳಿಕ ಅಬ್ಬಾಸ್ ಗುರುವಾರ ಸಂಜೆ ಸ್ವಗ್ರಾಮವನ್ನು ತಲುಪಿದ್ದ. ನೂರಾರು ಗ್ರಾಮಸ್ಥರು ಯೋಧನ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಇದು ತೀರ ಅವಮಾನದ ಸಂಗತಿ. ನನ್ನ ತಾಯಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲೂ ನನ್ನಿಂದ ಸಾಧ್ಯವಾಗಲಿಲ್ಲ. ತಾಯಿಯ ಶವದೊಂದಿಗೆ ನನ್ನನ್ನು ಅಧಿಕಾರಿಗಳು ಕಾಯಿಸುತ್ತಲೇ ಇದ್ದರು,ಆದರೆ ಅವರು ಹೆಲಿಕಾಪ್ಟರ್ ಕಳುಹಿಸಲೇ ಇಲ್ಲ ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅಬ್ಬಾಸ್ ತಿಳಿಸಿದ.
ಆದರೆ ಅಧಿಕಾರಿಗಳು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ನಾವು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದೆವು.. ಆದರೆ ಹವಾಮಾನದ ಬಗ್ಗೆ ಆ ಕುಟುಂಬಕ್ಕೆ ಗ್ಯಾರಂಟಿ ಇರಲಿಲ್ಲ, ಹೆಲಿಕಾಪ್ಟರ್ ಮೇಲಕ್ಕೆ ಹಾರುವ ಭರವಸೆಯೂ ಅವರಿಗಿರಲಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.







