ನಾಗಾಲ್ಯಾಂಡ್ ಮುಖ್ಯಮಂತ್ರಿ ಸುರಕ್ಷತೆಗೆ ನಿಗಾ
ಅಸ್ಸಾಂ ರೈಫಲ್ಸ್‌ಗೆ ಕೇಂದ್ರದ ಸೂಚನೆ
ಹೊಸದಿಲ್ಲಿ,ಫೆ.3: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಯನ್ನು ವಿರೋಧಿಸಿ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ಕೇಂದ್ರವು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಝೆಲಿಯಾಂಗ್ ಅವರ ಸುರಕ್ಷತೆಯ ಬಗ್ಗೆ ನಿಗಾ ವಹಿಸುವಂತೆ ಶುಕ್ರವಾರ ಅಸ್ಸಾಂ ರೈಫಲ್ಸ್‌ಗೆ ಸೂಚಿಸಿದೆ.
ಗುರುವಾರ ರಾಜಧಾನಿ ಕೊಹಿಮಾದಲ್ಲಿ ಹಿಂಸಾಚಾರಕ್ಕಿಳಿದ ಗುಂಪುಗಳು ಸರಕಾರಿ ಕಚೇರಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ಕರೆಸಬೇಕಾಗಿತ್ತು.
ನಾಗಾಲ್ಯಾಂಡ್ ಮುಖ್ಯಮಂತ್ರಿಗಳು ಮತ್ತು ಅವರ ನಿವಾಸವನ್ನು ರಕ್ಷಿಸಬೇಕು ಎಂದು ಅಸ್ಸಾಂ ರೈಫಲ್ಸ್‌ನ ಮಹಾ ನಿರ್ದೇಶಕರಿಗೆ ತಾನು ಸೂಚನೆ ನೀಡಿರುವುದಾಗಿ ಕೇಂದ್ರ ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ತಿಳಿಸಿದರು.
ಹಿಂಸಾಚಾರವನ್ನು ಕೈಬಿಡುವಂತೆ ನಾಗಾಲ್ಯಾಂಡ್ ಜನತೆಯನ್ನು ಕೋರಿದ ಅವರು, ‘ಕೆಲವು ಶಕ್ತಿಗಳು’ ಪ್ರತಿಭಟನೆಗೆ ಕುಮ್ಮಕ್ಕು ನೀಡಲು ಪ್ರಯತ್ನಿಸುತ್ತಿದ್ದು, ಇದನ್ನು ಜನರು ತಿಳಿದುಕೊಳ್ಳಬೇಕು ಎಂದರು. ಜನರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ರಾಜ್ಯದಲ್ಲಿ ಈಗಾಗಲೇ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಕಲ್ಪಿಸಿರುವುದಕ್ಕಾಗಿ ರಾಜ್ಯ ಸರಕಾರವು ಬುಡಕಟ್ಟು ಸಂಘಟನೆಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದೆ.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದಿರುವ ಸರಕಾರವು ಸ್ಥಳೀಯ ಸಂಸ್ಥೆಗಳಿಗ ಚುನಾವಣೆಗಳನ್ನು ರದ್ದುಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. ದಿಮಾಪುರದಲ್ಲಿ ಮಂಗಳವಾರ ಇಬ್ಬರು ಪ್ರತಿಭಟನಾ ನಿರತ ಯುವಕರು ಪೊಲೀಸರ ಗೋಲಿಬಾರ್‌ಗೆ ಬಲಿಯಾದ ಬಳಿಕ ಜನರ ಆಕ್ರೋಶ ಸ್ಫೋಟಗೊಂಡಿದೆ.
ನಿಷೇಧಾಜ್ಞೆ
ಕೊಹಿಮಾ ಜಿಲ್ಲೆಯಲ್ಲಿ ನಿಷೇಧಾಜ್ಞೆಯು ಮುಂದುವರಿದಿದ್ದು, ಶುಕ್ರವಾರ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ರಾಜಭವನ, ಮಖ್ಯಮಂತ್ರಿಗಳ ನಿವಾಸ ಮತ್ತು ಸಿವಿಲ್ ಸೆಕ್ರೆಟರಿಯೇಟ್ ನಿಷೇಧಾಜ್ಞೆಯ ವ್ಯಾಪ್ತಿಯಲ್ಲಿವೆ.
ರಾಜಭವನ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಮತ್ತು ಸಿವಿಲ್ ಸೆಕ್ರೆಟರಿಯೇಟ್‌ಗೆ ಪೊಲೀಸ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ಭದ್ರತೆ ಯನ್ನೊದಗಿಸಿವೆ ಎಂದು ಡಿಜಿಪಿ ಎಲ್.ಎಲ್.ಡೌಜೆಲ್ ತಿಳಿಸಿದರು.







