ಬಂಧಿತ ಐಎಸ್‌ಐ ಏಜೆಂಟ್ ಗುಲ್ಶನ್ ಕುಮಾರ್‌ನ ಕೋಚಿಂಗ್ ಸೆಂಟರ್‌ಗೆ ಎಟಿಎಸ್ ದಾಳಿ
ಹೊಸದಿಲ್ಲಿ, ಫೆ.1: ಭಾರತೀಯ ಸೇನಾ ಕಾರ್ಯಾಚರಣೆ ಬಗ್ಗೆ ಐಎಸ್‌ಐಗೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪಶ್ಚಿಮ ದಿಲ್ಲಿಯ ಉತ್ತಮ ನಗರ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್ ಮೇಲೆ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಎನ್‌ಸಿಆರ್ ಪ್ರದೇಶ, ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ವಿವಿಧೆಡೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಗುಲ್ಶನ್ ಕುಮಾರ್‌ನನ್ನು ಬಂಧಿಸಲಾಗಿತ್ತು. ಜಮ್ಮು ಕಾಶ್ಮೀರ ವಲಯದ ಮಿಲಿಟರಿ ಗುಪ್ತಚರ ವಿಭಾಗ ನೀಡಿದ ಮಾಹಿತಿ ಆಧಾರದಲ್ಲಿ ದಾಳಿ ನಡೆಸಲಾಗಿತ್ತು. ಮಿಲಿಟರಿ ಮಾಹಿತಿಗಳ ಸಂಬಂಧ ಅನುಮಾನಾಸ್ಪದ ಕರೆಗಳು ಮಾಡಿದ ಹಿನ್ನೆಲೆಯಲ್ಲಿ ಈ ಸಂಶಯ ವ್ಯಕ್ತಪಡಿಸಿತ್ತು. ಈತನ ವಿಚಾರಣೆ ನಡೆಸಿದಾಗ ಕುಮಾರ್, ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಯೊಂದರ ಐಟಿ ವಿಭಾಗದ ಮುಖ್ಯಸ್ಥನಾಗಿದ್ದು, ಅಲ್ಲಿಂದ ಅಕ್ರಮ ದೂರವಾಣಿ ವಿನಿಮಯ ಕೇಂದ್ರ ನಿರ್ವಹಿಸುತ್ತಿದ್ದುದು ಬೆಳಕಿಗೆ ಬಂದಿದೆ.
ಈತ ನೀಡಿದ ಮಾಹಿತಿ ಆಧಾರದಲ್ಲಿ ಕೋಚಿಂಗ್ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಇಂಟರ್‌ನೆಟ್ ಕರೆಗಳನ್ನು ಧ್ವನಿ ಕರೆಗಳಾಗಿ ಪರಿವರ್ತಿಸುವ ಸಾಫ್ಟ್ ವೇರ್ ಹಾಗೂ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಹಲವು ಸಿಮ್ ಬಾಕ್ಸ್‌ಗಳನ್ನು ಕೂಡಾ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಭಾರತೀಯ ದೂರವಾಣಿ ಸಂಖ್ಯೆಗಳನ್ನಷ್ಟೇ ವೀಕ್ಷಿಸಬಹುದಾಗಿತ್ತು.





