ಉತ್ತರಪ್ರದೇಶ: ರೀಚಾರ್ಜ್ ಶಾಪ್‌ಗಳಲ್ಲಿ ಮಾರಾಟಕ್ಕಿದೆ ಹುಡುಗಿಯರ ನಂಬರ್
ಲಕ್ನೋ,ಫೆ.3: ಉತ್ತರ ಪ್ರದೇಶದಾದ್ಯಂತ ರೀಚಾರ್ಜ್ ಅಂಗಡಿಗಳಲ್ಲಿ ಅಮಾಯಕ ಹುಡುಗಿಯರ ಮೊಬೈಲ್ ನಂಬರ್‌ಗಳು ಮಾರಾಟವಾಗುತ್ತಿವೆ. ಹುಡುಗಿಯರ ಸೌಂದರ್ಯವನ್ನು ಅವಲಂಬಿಸಿ ಈ ನಂಬರಗಳಿಗೆ ಬೆಲೆಗಳನ್ನು ನಿಗದಿಗೊಳಿಸ ಲಾಗುತ್ತದೆ. ಅವರಿಗೆ ಮೊಬೈಲ್‌ನಲ್ಲಿ ಕಿರುಕುಳ ನೀಡಲು ಹರಾಮಿ ಗಂಡಸರು ಕೇಳಿದಷ್ಟು ಹಣವನ್ನು ಕೊಟ್ಟು ನಂಬರ್‌ಗಳನ್ನು ಪಡೆದು ಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಪೇಕ್ಷಿತ ಕರೆಗಳ ವಿರುದ್ಧ ಮಹಿಳೆಯರ ದೂರುಗಳು ಮಹಾಪೂರದಂತೆ ಪೊಲೀಸ್ ಸಹಾಯವಾಣಿಗೆ ಬರತೊಡಗಿದಾಗ ಇಂತಹ ಹುಲುಸಾದ ದಂಧೆಯೊಂದು ನಡೆಯುತ್ತಿದೆ ಎನ್ನುವುದು ಬೆಳಕಿಗೆ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪೊಲೀಸ್ ಸಹಾಯವಾಣಿ ಯಲ್ಲಿ ದಾಖಲಾದ ಆರು ಲಕ್ಷಕ್ಕೂ ಅಧಿಕ ದೂರುಗಳ ಪೈಕಿ ಶೇ.90ರಷ್ಟು ಮೊಬೈಲ್ ಫೋನ್‌ಗಳಲ್ಲಿ ಮಹಿಳೆಯರಿಗೆ ಕಿರುಕುಳಕ್ಕೆ ಸಂಬಂಧಿಸಿವೆ.
ಮಹಿಳೆಯರನ್ನು ಬಲೆಗೆ ಬೀಳಿಸಲು ‘ಹಮೆಂ ಆಪ್ ಸೆ ದೋಸ್ತಿ ಕರ್‌ನಾ ಹೈ’ ಎಂಬ ಸಾಲಿನೊಂದಿಗೆ ಮಾತು ಶುರುವಿಟ್ಟುಕೊಳ್ಳುವ ಹೆಚ್ಚಿನ ಗಂಡಸರು ಮಹಿಳೆಯರು ಕರೆನ್ಸಿ ರೀಚಾರ್ಜ್ ಮಾಡಿಸಿಕೊಳ್ಳುವ ಅಂಗಡಿಯಿಂದ ಅವರ ನಂಬರ್‌ಗಳನ್ನು ಪಡೆದು ಕೊಳ್ಳುತ್ತಾರೆ. ನೀತಿಬಾಹಿರ ದಂಧೆ ನಡೆಸುವ ರೀಚಾರ್ಜ್ ಅಂಗಡಿಯವರು ಮಹಿಳೆಯರ ನಂಬರ್‌ಗಳನ್ನು ಸೇವ್ ಮಾಡಿಟ್ಟುಕೊಂಡು ಬಳಿಕ ಕಾಸು ನೀಡಲು ಸಿದ್ಧವಿದ್ದವರಿಗೆ ಆ ನಂಬರ್ ಗಳನ್ನು ದಾಟಿಸುತ್ತಾರೆ. ‘ಸುಂದರಿ’ ಹುಡುಗಿ ಯರ ನಂಬರ್ 500 ರೂ.ವರೆಗೂ ಮಾರಾಟ ವಾಗುತ್ತದೆ! ಸಾಮಾನ್ಯ ರೂಪದ ಹುಡುಗಿಯರ ಮೊಬೈಲ್ ನಂಬರ್ 50 ರೂ.ಗೆ ಮಾರಾಟವಾಗುತ್ತದೆ.
ಈ ಬೀದಿಕಾಮಣ್ಣಗಳು ಕೆಲವೊಮ್ಮೆ ಹೀಗೆ ನಂಬರ್ ಪಡೆದುಕೊಂಡ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಹುಡುಗಿಯರಿಗೆ ಅಶ್ಲೀಲ ಚಿತ್ರಗಳನ್ನೂ ರವಾನಿಸುವುದೂ ಇದೆ.
ಮೊಬೈಲ್ ರೀಚಾರ್ಜ್ ಏಜೆಂಟ್ ಆಗುವುದು ಸುಲಭ. ಫಾರ್ಮ್‌ವೊಂದನ್ನು ತುಂಬಿ ಭದ್ರತಾ ಠೇವಣಿಯನ್ನು ನೀಡಿದರೆ ಸಾಕು. ಹಾಗೆಂದು ಎಲ್ಲರೂ ಹುಡುಗಿಯರ ಮೊಬೈಲ್ ನಂಬರ್ ಮಾರಾಟದ ದಂಧೆಯಲ್ಲಿ ತೊಡಗಿಕೊಂಡಿಲ್ಲ.
ಅವಿವಾಹಿತ ಯುವತಿಯರ ಜೊತೆಗೆ ವಿವಾಹಿತ ಮಹಿಳೆಯರೂ ಈ ಮೊಬೈಲ್ ಫೋನ್ ಕಿರುಕುಳದಿಂದ ಹೊರತಾಗಿಲ್ಲ. ಪೊಲೀಸ್ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದವರಲ್ಲಿ ವಿವಾಹಿತೆಯರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ವ್ಯಂಗ್ಯವೆಂದರೆ ಉತ್ತರ ಪ್ರದೇಶದಲ್ಲಿ ಹೀಗೆ ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ಮಾರಾಟ ಮಾಡುತ್ತಿರುವರ ಅಥವಾ ಖರೀದಿಸುತ್ತಿರುವವರ ಪೈಕಿ ಒಬ್ಬರೂ ಈವರೆಗೆ ಜೈಲಿಗೆ ಹೋಗಿಲ್ಲ. ಈ ದೂರುಗಳಿಂದ ಯಾವುದೇ ಅಪರಾಧ ಸಾಬೀತು ಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಐಜಿ ನವನೀತ್ ಸೆಕೆರಾ.
ಮೊಬೈಲ್ ನಂಬರ್‌ಗಳನ್ನು ಮಾರಾಟ ಮಾಡುವವರನ್ನು ಬಂಧಿಸಿದರೆ ರಾಜ್ಯದ ಜೈಲುಗಳು ತುಂಬಿ ಹೋಗುತ್ತವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು!
ಸದ್ಯಕ್ಕೆ ಸಹಾಯವಾಣಿಯ ಉಸ್ತುವಾರಿ ಹೊಂದಿರುವವರು ಮಹಿಳೆಯರಿಗೆ ಕಿರುಕುಳ ಕೊಡುವ ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಈ ವಿಷಯದಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಅಗತ್ಯವಾಗಿವೆ ಎನ್ನುತ್ತಾರೆ ಕ್ರಿಮಿನಲ್ ಲಾಯರ್‌ಗಳು.
ಮಹಿಳೆ ನಂಬಿಕೆಯಿಂದ ತನ್ನ ನಂಬರ್‌ನ್ನು ರೀಚಾರ್ಜ್ ಅಂಗಡಿಯವನಿಗೆ ನೀಡಿರುತ್ತಾಳೆ. ಆತ ಅದನ್ನು ಮಾರಾಟ ಮಾಡಿದರೆ ಹಣದ ಲಾಭಕ್ಕಾಗಿ ಮಾಹಿತಿಯನ್ನು ವಿನಿಮಯಿಸಿಕೊಂಡ ಅಪರಾಧವೆಸಗುತ್ತಾನೆ. ಇದಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೆ ಫೋನ್ ಮೂಲಕ ಚುಡಾವಣೆಗೂ ಆತ ಕುಮ್ಮಕ್ಕು ನೀಡಿರುತ್ತಾನೆ ಎಂದು ವಕೀಲ ಅವಿಂದರ್ ಸಿಂಗ್ ಹೇಳಿದರು.







