ಬಜೆಟ್ ಮಂಡನೆಗಾಗಿ ಅಹ್ಮದ್ ನಿಧನ ಸುದ್ದಿ ವಿಳಂಬಿಸಿದ ಸರಕಾರ
ವಿಪಕ್ಷಗಳ ಆರೋಪ
ಹೊಸದಿಲ್ಲಿ, ಫೆ.3: ಮಾಜಿ ಕೇಂದ್ರ ಸಚಿವ ಇ.ಅಹ್ಮದ್ ಅವರ ನಿಧನ ಸುದ್ದಿಯನ್ನು ಬಜೆಟ್ ಮಂಡನೆಯ ಕಾರಣಕ್ಕೆ ಸರಕಾರ ತಡವಾಗಿ ಪ್ರಕಟಿಸಿದೆ ಎಂದು ವಿಪಕ್ಷಗಳು ಆರೋ ಪಿಸಿದ್ದು ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿವೆ. ಇ.ಅಹ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಲೇ ಅವರು ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಕೆಲವು ವೈದ್ಯರು ತಿಳಿಸಿದ್ದಾರೆ ಎಂದು ರಾಜ್ಯಸಭೆಯ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಆರೋಪಿಸಿದರು. ಅಹ್ಮದ್ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು ಅಲ್ಲಿ ಮೃತಪಟ್ಟರು ಎಂದು ಕೆಲವರು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಲು ಹಿರಿಯ ಮುಖಂಡರಿಗೆ ಅವಕಾಶ ನೀಡಲಿಲ್ಲ. ಅಲ್ಲದೆ ಆರಂಭದಲ್ಲಿ ಅಹ್ಮದರ ಮಕ್ಕಳಿಗೂ ಅವರನ್ನು ನೋಡಲು ಅವಕಾಶ ನೀಡಲಾಗಿಲ್ಲ. ಅವರ ನಿಧನ ವಾರ್ತೆಯನ್ನು ಸರಕಾರ ಯಾಕೆ ತಡವಾಗಿ ಪ್ರಕಟಿಸಿದೆ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದವರು ಆಗ್ರಹಿಸಿದರು.
Next Story





