ಆಂತರಿಕ ಕಲಹದಿಂದ ನಷ್ಟ ಯಾರಿಗೆ?
ಭಾಜಪದ ಅಂತರಿಕ ಕಲಹಕ್ಕೆ ಸ್ವಲ್ಪವಿರಾಮ ಬಿದ್ದಿದೆ. ಈ ವಿರಾಮ ಶಾಶ್ವತವೋ ಅಥವಾ ತಾತ್ಕಾಲಿಕವೋ ಎನ್ನುವುದು ಮುಂದಿನ ದಿನಗಳಲ್ಲಿ ನಿಚ್ಚಳವಾಗಿ ಗೋಚರಿಸಲಿದೆ.
ಭಾರತದಲ್ಲಿ ಕೇವಲ ಎಡ ಪಕ್ಷಗಳಲ್ಲಿ ಮಾತ್ರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುತ್ತವೆ. ಉಳಿದ ಪಕ್ಷಗಳಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ, ಅದು ಸಾಮಾನ್ಯವಾಗಿ ಕೆಲವರ ಅಧಿಕಾರ ದಾಹವನ್ನು ತಣಿಸುವ ನಿಟ್ಟಿನಲ್ಲಿ ಇರುತ್ತದೆ. ಇದಕ್ಕೆ ಈ ದೇಶದಲ್ಲಿ ಸಾಕಷ್ಟು ಉದ್ದದ ಇತಿಹಾಸವಿದೆ. ಸಧ್ಯ ಕರ್ನಾಟಕ ಭಾಜಪದ ಸಮಸ್ಯೆಯೂ ಇದಕ್ಕೆ ಹೊರತಾಗಿಲ್ಲ. ಮೇಲುನೋಟಕ್ಕೆ ಈ ವಿವಾದದ ತಳ ಇರುವುದು ಭಾಜಪದ ಜಿಲ್ಲಾ ಪದಾಧಿಕಾರಿಗಳ ಅಯ್ಕೆಯ ವಿಷಯದಲ್ಲಿ ಮತ್ತು ಅಯ್ಕೆಯಲ್ಲಿ ಪಾರದರ್ಶಕತೆಯ ಕೊರತೆಯಲ್ಲಿ. ಈ ಪ್ರಕ್ರಿಯೆಯಲ್ಲಿ ಅರ್ಹತೆ ಮಾನದಂಡವಾಗದೇ, ಸ್ವಜನ ಪಕ್ಷಪಾತತನ ಮೆರೆದಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ದಶಕದಿಂದ ದುಡಿದವರನ್ನು ಪಕ್ಷ ಸಂಘಟನೆಯಲ್ಲಿ ಮತ್ತು ಪದಾಧಿಕಾರಿಗಳ ನೇಮಕದಲ್ಲಿ ನಿರ್ಲಕ್ಷಿಸಲಾಗಿದೆ ಎನ್ನುವ ದೂರೂ ಇದೆ. ಈ ಅರೋಪದಲ್ಲಿ ಹುರುಳಿಲ್ಲದಿಲ್ಲ ಎಂದು ಪಕ್ಷದಲ್ಲಿ ತಮ್ಮಿಳಗೇ ಮಾತನಾಡಿಕೊಳ್ಳುವವರೂ ಇದ್ದಾರೆ. ಆದರೆ ಈ ನಿಟ್ಟಿನಲ್ಲಿ ಬಹಿರಂಗವಾಗಿ ಮುಂದಿನ ಸಾಲಿನವರ ಮತ್ತು ವೇದಿಕೆಯಲ್ಲಿ ಆಸೀನರಾಗುವವರ ವಿರುದ್ಧ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಾಧ್ಯತೆಯನ್ನು ತಪ್ಪಿಸಿಕೊಳ್ಳಲು ಯಾರೂ ಸಿದ್ದರಿಲ್ಲ. ಅದಕ್ಕೂ ಮಿಗಿಲಾಗಿ ಕೆಲವು ಜನರು ಪಕ್ಷದ ಅಂತರಿಕ ವ್ಯವಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಮೂಗು ತೋರಿಸುತ್ತಾರೆ ಎನ್ನುವ ಪರೋಕ್ಷ ಟೀಕೆ ಬೇರೆ, ಇಂತಹ ಟೀಕೆಗಳು ಒಂದು ಎಲ್ಲೆ ಮೀರಿ ಕಾಣಿಸುತ್ತಿರುವಾಗ, ಸಂಬಂಧಪಟ್ಟ ರಾಜಕೀಯ ಪಕ್ಷಗಳು ಕೂಡಲೇ ಬೆಂಕಿಯನ್ನು ನಂದಿಸಲು ಕಾರ್ಯ ತತ್ಪರವಾಗಬೇಕಾಗುತ್ತದೆ.
ದೇಶದಲ್ಲಿ ಮೋದಿ ಅಲೆಯ ಪ್ರಭಾವ ಇನ್ನೂ ಇದೆಯೋ ಇಲ್ಲವೋ ಎನ್ನುವುದು ಪಂಚರಾಜ್ಯಗಳ ಚುನಾವಣೆ ಪರಿಣಾಮದಲ್ಲಿ ನಿಚ್ಚಳವಾಗಿ ಗೊತ್ತಾಗುತ್ತದೆ. ಮುಂದಿನ ಚುನಾವಣೆಗಳ ಪರಿಣಾಮದ ಬಗೆಗಿನ ಚುನಾವಣಾ ಪೂರ್ವ ಸಮೀಕ್ಷೆಯನ್ನು ನೋಡಿದಾಗ ಭಾಜಪಕ್ಕೆ ಅಂತಹ ಆಶಾಭಾವನೆ ಕಂಡುಬಂದಿಲ್ಲ. ದೇಶದಲ್ಲಿನ ನವೆಂಬರ್ 9ರ ನಂತರದ ಬೆಳವಣಿಗೆ ಆ ಪಕ್ಷದ ವರ್ಚಸ್ಸನ್ನು ಕುಗ್ಗಿಸಿದೆ. ಈ ಸಂದಿಗ್ಧ ಸಮಯದಲ್ಲಿ, ಭಾಜಪವು ತನ್ನ ‘ಕಾಂಗ್ರೆಸ್ ಮುಕ್ತ’ ಅಥವಾ ‘ವಿರೋಧ ಪಕ್ಷ ಮುಕ್ತ ಭಾರತ’ ಮಾಡುವ ಕನಸನ್ನು ಮರೆಯಬೇಕಾಗಿದೆ. ಭಾಜಪಕ್ಕೆ ಈಗಾಗಲೇ ಹಿಂದಿವಾಲಾಗಳ ಮತ್ತು ಹಿಂದಿ ರಾಜ್ಯಗಳ ಪಕ್ಷ ಎನ್ನುವ ಹೆಸರೂ ಇದ್ದು, ದಕ್ಷಿಣದಲ್ಲಿ ಚುನಾವಣೆಯನ್ನು ಗೆದ್ದು, ತಾನು ಎಲ್ಲೋ ಸಲ್ಲಬಲ್ಲೆ ಎನ್ನುವುದನ್ನು ತೋರಿಸುವ ಅನಿವಾರ್ಯತೆಯೂ ಇದೆ. ಹೀಗಿರುವಾಗ 2013ರ ಚುನಾವಣೆ ಸಮಯದಲ್ಲಿ ಯಡಿಯೂರಪ್ಪನಡೆದುಕೊಂಡಂತೆ, ಈಶ್ವರಪ್ಪಕೂಡಾ ಅದೇ ಹಾದಿಯಲ್ಲಿ ನಡೆಯದಂತೆ ದಿಲ್ಲಿಯವರು ಕಾವಲುಕಾಯಬೇಕಾದ ಪರಿಸ್ಥಿತಿಯಿದೆ.
ಈಶ್ವರಪ್ಪನವರ ಹೋರಾಟದಲ್ಲಿ ಮೇಲುನೋಟಕ್ಕೆ ಒಬ್ಬಂಟಿಗರಾಗಿ ಕಂಡುಬಂದರೂ, ಹಿಂಬದಿಯಲ್ಲಿ ಸಾಕಷ್ಟು ಬೆಂಬಲವಿತ್ತು ಎನ್ನುವ ಮಾತು ಕೇಳಿಬರುತ್ತಿತ್ತು. ಬಹುಷ: ಅದೇ ಕಾರಣಕ್ಕೇನೋ ಅವರ ವರಿಷ್ಟರು ಅವರ ವಿರುದ್ದ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಯಡಿಯೂರಪ್ಪನವರಿಗೆ ಒಂದು ಸಮುದಾಯದ ಬೆಂಬಲ ಇದ್ದಂತೆ, ಈಶ್ವರಪ್ಪನವರೂ ಇನ್ನೊಂದು ಸಮುದಾಯದ ಬೆಂಬಲವನ್ನು ಕ್ರೋಡೀಕರಿಸಿ ತಮ್ಮನ್ನು ಅಷ್ಟು ಸುಲಭವಾಗಿ ನೇಪಥ್ಯಕ್ಕೆ ಸರಿಸಲು ಸಾಧ್ಯವಿಲ್ಲವೆಂದು ಅಸಕ್ತರಿಗೆ ತೋರಿಸುತ್ತಲೇ ಇದ್ದರು. ಸಧ್ಯದ ರಾಜಕೀಯದಾಟದಲ್ಲಿ ಇಬ್ಬರಲ್ಲಿ ಯಾರ ಕೈ ಮೇಲಾದರೂ ಕರ್ನಾಟಕದಲ್ಲಿ ಅಧಿಕಾರದ ಆಸೆಯ ಕನಸನ್ನು ಕೈಬಿಡಬೇಕಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೂಡಾ ಒಳಜಗಳಗಳಿಂದಾಗಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಹಾಗೆಯೇ ಹಲವು ಹಗರಣ ಮತ್ತು ಗೊಂದಲದಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗೆ ನಡೆದ ಎ.ಪಿ.ಎಂ.ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೂ, ಅದು ತೃಪ್ತಿದಾಯಕವಾಗಿರಲಿಲ್ಲ.
ಹೀಗಾಗಿ ಈ ಎರಡೂ ಪಕ್ಷಗಳು ಇದುವರೆಗೆ ತಮ್ಮಿಂದಾದ ತಪ್ಪನ್ನು ತಿದ್ದಿಕೊಂಡು ರಾಜ್ಯದ ಜನತೆಯ ಮನಗೆದ್ದರೆ ಮಾತ್ರ ಮತ್ತೆ ಅಧಿಕಾರದ ಸನಿಹ ಸುಳಿಯಲು ಸಾಧ್ಯ. ಇಲ್ಲದಿದ್ದರೆ ಇವರಿಗೆ ಮತದಾರರೇ ಮನೆಯ ದಾರಿ ತೋರಿಸುವುದು ಖಂಡಿತ.







