"ಅತ್ಯಾಚಾರ ಬೆದರಿಕೆ ಹಾಕುವ 26 ಟ್ವಿಟ್ಟರ್ ಬಳಕೆದಾರರನ್ನು ಪ್ರಧಾನಿ ಫಾಲೋ ಮಾಡುತ್ತಿದ್ದಾರೆ"
ಸಂಸದ ಡೆರಿಕ್ ಆರೋಪ

ಹೊಸದಿಲ್ಲಿ, ಫೆ.4: ‘‘ಅತ್ಯಾಚಾರ ಬೆದರಿಕೆ ಹಾಗೂ ಮತೀಯ ಬೆದರಿಕೆಗಳನ್ನು ಹಾಕುವ 26 ಬಳಕೆದಾರರನ್ನು ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ’’ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರಿಕ್ ಓ’ಬ್ರಿಯನ್ ಅವರು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಸಂದರ್ಭ ರಾಜ್ಯಸಭೆಯಲ್ಲಿ ಆರೋಪಿಸಿ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ತಾನು ಉಲ್ಲೇಖಿಸಿದ 26 ಟ್ವಿಟ್ಟರ್ ಬಳಕೆದಾರರಲ್ಲಿ ಇಬ್ಬರ ಖಾತೆಗಳನ್ನು ಟ್ವಿಟ್ಟರ್ ರದ್ದುಗೊಳಿಸಿದೆ ಎಂದು ಹೇಳಿದರಲ್ಲದೆ, ಅವುಗಳಲ್ಲಿ ಒಂದು ಹ್ಯಾಂಡಲ್ @ಭಾಸ್ಕರ್ ಎಂದಾಗಿತ್ತು ಹಾಗೂ ರಾಹುಲ್ ರಾಜ್ ಎಂಬವರ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದಿದ್ದಾರೆ. ಈ ‘‘ಟ್ವಿಟ್ಟರ್ ಟ್ರೋಲ್ ಗಳು ಹಾಗೂ ಪೇಯ್ಡೋ ಹ್ಯಾಂಡಲ್ಸ್’’ ಗಳನ್ನು ಪ್ರಧಾನಿಯ ನಿವಾಸದಲ್ಲಿ ಆಯೋಜಿಸಲಾದ ಡಿಜಿಟಲ್ ಹಾಗೂ ಸೋಶಿಯಲ್ ಮೀಡಿಯಾ ಪಾರ್ಟಿಗೆ ಆಹ್ವಾನಿಸಲಾಗಿತ್ತು ಎಂದೂ ಡೆರಿಕ್ ಆರೋಪಿಸಿದ್ದಾರೆ.
ಆದರೆ ಡೆರಿಕ್ ಆರೋಪವನ್ನು ರಾಜ್ ಅವರು ಟ್ವೀಟ್ ಮುಖಾಂತರ ನಿರಾಕರಿಸಿದ್ದು, ತಾನು ಯಾವತ್ತೂ ಪ್ರಧಾನಿಯನ್ನು ಭೇಟಿಯಾಗಿಲ್ಲ ಹಾಗೂ ತನ್ನ ಖಾತೆಯನ್ನು ಟ್ವಿಟ್ಟರ್ ರದ್ದುಪಡಿಸಿಲ್ಲ ಎಂದು ಹೇಳಿದ್ದಾರೆ. ‘‘ಈ ಕೆಟ್ಟ ಆರೋಪಗಳಿಂದ ಒಬ್ಬ ಸಾಮಾನ್ಯ ನಾಗರಿಕನಾದ ನನಗೆ ಭಯವಾಗುತ್ತದೆ. ಸಂಸತ್ತು ಜನಸಾಮಾನ್ಯರನ್ನು ರಕ್ಷಿಸಬೇಕೇ ವಿನಹ ಅವರನ್ನು ಬೆದರಿಸುವುದಲ್ಲ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್ ಬಳಕೆದಾರರೂ ರಾಜ್ ಪರವಾಗಿ ನಿಂತಿದ್ದು ತೃಣಮೂಲ ಸಂಸದ ಕ್ಷಮೆ ಯಾಚಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅಲ್ಲದೆ, ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ರಾಜ್ ಅವರಿಗೆ ಸಂಸತ್ತಿಗೆ ಬಂದು ಸ್ಪೀಕರ್ ಮುಂದೆ ತಮ್ಮ ಹೇಳಿಕೆಯನ್ನು ನೀಡಲು ಆಸ್ಪದ ನೀಡಬೇಕೆಂದೂ ಟ್ವಿಟ್ಟರ್ ಬಳಕೆದಾರರು ಆಗ್ರಹಿಸಿದ್ದಾರೆ.







