ಹಿಂದುತ್ವಕ್ಕೆ ರಾಷ್ಟ್ರೀಯತೆಯ ಬಣ್ಣ ಹಚ್ಚಲಾಗುತ್ತಿದೆ: ಪ್ರಕಾಶ್ ಕಾರಟ್

ಕೊಚ್ಚಿ,ಫೆ. 4: ರಾಷ್ಟ್ರೀಯತೆ ಎಂಬ ಸಂಕಲ್ಪಕ್ಕೆ ಹಿಂದುತ್ವ ರಾಷ್ಟ್ರೀಯತೆಯೆಂದು ಬಣ್ಣಹಚ್ಚುವ ಪ್ರಯತ್ನವನ್ನು ಆರೆಸ್ಸೆಸ್ ಮತ್ತು ಬಿಜೆಪಿ ನಡೆಸುತ್ತಿದೆ ಎಂದು ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ಹೇಳಿದ್ದಾರೆ. ಹಿಂದುತ್ವರಾಷ್ಟ್ರೀಯತೆ ಎನ್ನುವುದು ಹಿಂದೂ ಕೋಮುವಾದವಾಗಿದೆ. ಹಿಂದುತ್ವವಾದ ಅಧಿಕೃತ ಆಶಯ ಎನ್ನುವ ನೆಲೆಯಲ್ಲಿ ಕೇಂದ್ರ ಸರಕಾರ ಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಡಿವೈಎಫ್ ಐ ಅಖಿಲ ಭಾರತ ಸಮ್ಮೇಳನದ ಪ್ರಯುಕ್ತ ನಡೆದ ಕಪಟ ರಾಷ್ಟ್ರೀಯತೆ ಮತ್ತು ಕೋಮುವಾದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಕೇಂದ್ರಸರಕಾರವನ್ನು ಉಪಕರಣವನ್ನು ಮಾಡಿ ಸಂವಿಧಾನ ಮತ್ತು ಜಾತ್ಯತೀತೆಯನ್ನು ಬುಡಮೇಲು ಗೊಳಿಸಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ. ರಾಷ್ಟ್ರಸುರಕ್ಷೆ ಹೆಸರಿನಲ್ಲಿ ನ್ಯಾಯಾಂಗ ಮತ್ತು ಸೈನ್ಯವನ್ನು ಸರಕಾರ ನಿಯಂತ್ರಿಸುತ್ತಿದೆ. ಸುಪ್ರೀಂಕೋರ್ಟು ನಿರ್ದೇಶಿಸಿದ ಕೊಲಿಜಿಯಂ ಪ್ರಕಾರ ಹೈಕೋರ್ಟು ಜಡ್ಜ್‌ಗಳನ್ನು ನೇಮಿಸಲು ಸರಕಾರ ಸಿದ್ಧವಿಲ್ಲ. ಜಡ್ಜ್‌ಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ನಡೆಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ರಾಷ್ಟ್ರದ ಸುರಕ್ಷೆಯನ್ನು ಮುಂದಿಟ್ಟು ಇವರ ನೇಮಕಾತಿಯನ್ನು ಪರಿಶೀಲಿಸುವ ಅಧಿಕಾರ ಸರಕಾರಕ್ಕಿದೆ ಎಂದು ಕೇಂದ್ರದ ನಿಲುವು ಆಗಿದೆ. ಇದು ಸರಿಯಲ್ಲ. ಮಾತ್ರವಲ್ಲ ಹಿಂದುತ್ವ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಬುದ್ಧಿ ಜೀವಿಗಳು, ವಿದ್ಯಾರ್ಥಿಗಳು, ಅಧ್ಯಾಪಕರು, ಸಾಂಸ್ಕೃತಿಕ-ರಾಜಕೀಯ ನಾಯಕರನ್ನೆಲ್ಲ ರಾಷ್ಟ್ರ ಸುರಕ್ಷೆ ಎನ್ನುವ ಪದ ಉಪಯೋಗಿಸಿ ದೇಶದ್ರೋಹಿಯೆಂದು ಚಿತ್ರೀಕರಿಸುವ ಅಪಾಯಕಾರಿ ನಡವಳಿಕೆ ಕೇಂದ್ರಸರಕಾರದಿಂದುಂಟಾಗುತ್ತಿದೆ.
ಯಾವತ್ತೂ ರಾಜಕೀಕರಣ ಗೊಳ್ಳದಿದ್ದ ಸೇನೆಯನ್ನು ನಿಯಂತ್ರಣದಲ್ಲಿ ತರುವ ಪ್ರಯತ್ನ ಈಗ ನಡೆಯುತ್ತಿದೆ. ಇಬ್ಬರು ಹಿರಿಯ ಸೇನಾಧಿಕಾರಿಗಳನ್ನು ಮೂಲೆಗೊತ್ತಿ ಮೂರನೆಯ ವ್ಯಕ್ತಿಯನ್ನು ಸೇನೆಯ ಮುಖ್ಯಸ್ಥನಾಗಿ ಕೇಂದ್ರ ನೇಮಿಸಿತು. ಎಲ್ಲ ಸೇನಾಮುಖ್ಯಸ್ಥರನ್ನು ತನ್ನಿಷ್ಟದಂತೆ ನೇಮಿಸಲು ಮೋದಿ ಸರಕಾರ ಮುಂದಾಗುತ್ತಿದೆ. ಉನ್ನತ ವಿದ್ಯಾಭ್ಯಾಸ ರಂಗ ಮತ್ತು ಸಾಂಸ್ಕೃತಿಕ ರಂಗವನ್ನೂ ಹಿಂದುತ್ವ ಶಕ್ತಿಗಳ ಮೂಲಕ ನಿಯಂತ್ರಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಪ್ರಕಾಶ್ ಕಾರಟ್ ಹೇಳಿದರೆಂದು ವರದಿ ತಿಳಿಸಿದೆ.







