ಇಂಗ್ಲೆಂಡ್ ವಿರುದ್ಧದ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ ಮಾತು ಲೀಕ್ ?
ಗೊಂದಲದ ಗೂಡಾದ ಬಿಸಿಸಿಐ

ಮುಂಬೈ, ಫೆ.4: ಬಿಸಿಸಿಐನಿಂದ ಹೊರದಬ್ಬಲ್ಪಟ್ಟ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಂದಾಗಿ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮಿನ ಮಾತುಕತೆಗಳು ಲೀಕ್ ಆಗುತ್ತಿದೆಯೇ? ಈ ಒಂದು ಪ್ರಶ್ನೆ ಇಂಗ್ಲೆಂಡ್ ತಂಡದೆದುರು ಆಡಿದ ಟೀಮ್ ಇಂಡಿಯಾದ ಆಟಗಾರರನ್ನು ಈಗಲೂ ಕಾಡುತ್ತಿದೆ.
ಕನಿಷ್ಠ ಇಬ್ಬರು ಆಟಗಾರರು ನೀಡಿದ ಮಾಹಿತಿಯಂತೆ ಟೀಮ್ ಇಂಡಿಯಾದ ಮ್ಯಾನೇಜರ್ ನಿಶಾಂತ್ ಅರೋರಾ ಅವರು ಡ್ರೆಸ್ಸಿಂಗ್ ರೂಮಿನಲ್ಲಿ ಆಟಗಾರರು ನಡೆಸುವ ಮಾತುಕತೆಗಳನ್ನು ಮಾಜಿ ಬಿಸಿಸಿಐ ಅಧ್ಯಕ್ಷ ಠಾಕೂರ್ ಅವರಿಗೆ ಲೀಕ್ ಮಾಡುತ್ತಿದ್ದಾರೆ.
ಟೀಮ್ ಇಂಡಿಯಾದ ಇಬ್ಬರು ಹಿರಿಯ ಸದಸ್ಯರು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರಿಗೆ ಮುಂಬೈನಲ್ಲಿ ಈ ವಿಚಾರ ತಿಳಿಸಿ ಅರೋರಾ ಅವರು ಡ್ರೆಸ್ಸಿಂಗ್ ರೂಮಿನಲ್ಲಿ ನಡೆಯುವ ಮಾತುಕತೆಗಳ ಬಗ್ಗೆ ತೀವ್ರ ಆಸಕ್ತರಾಗಿದ್ದಾರೆ ಹಾಗೂ ಅವುಗಳನ್ನು ಹಾಗೆಯೇ ಠಾಕೂರ್ ಎದುರು ಭಟ್ಟಿಯಿಳಿಸುತ್ತಿದ್ದಾರೆಂದು ದೂರಿದ್ದಾರೆನ್ನಲಾಗಿದೆ.
ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಅನುರಾಗ್ ಠಾಕೂರ್ ಅವರನ್ನು ಹೊರನಡೆಯುವಂತೆ ಸುಪ್ರೀಂ ಕೋರ್ಟ್ ಹೇಳಿದಂದಿನಿಂದ ಈ ಬೆಳವಣಿಗೆ ನಡೆಯುತ್ತಿದೆಯೆಂಬ ಶಂಕೆ ಆಟಗಾರರಿಗಿದೆ. ಈ ವಿಚಾರದಲ್ಲಿ ಆಟಗಾರರಿಗೂ ಚಿಂತೆಯಾಗಿದೆ ಎಂದು ಹೇಳಲಾಗಿದೆ.
ಮೀಡಿಯಾ ಮ್ಯಾನೇಜರ್ ಕೆಲಸ ಮಾಧ್ಯಮದ ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದರೂ ಈ ಮನುಷ್ಯ ಎಲ್ಲಾ ಕಡೆ ನುಸುಳುತ್ತಾನೆ, ಡ್ರೆಸ್ಸಿಂಗ್ ರೂಮಿನಲ್ಲಿ, ಆಟಗಾರರು ಸಂಭ್ರಮಾಚರಣೆಯಲ್ಲಿರುವಾಗ ಹಾಗೂ ತಂಡ ಸದಸ್ಯರ ಬಗ್ಗೆ ಚರ್ಚಿಸುವಾಗಲೂ ಇರುತ್ತಾರೆ’’ ಎಂದು ಆಟಗಾರರೊಬ್ಬರು ಮಾಹಿತಿ ನೀಡಿದ್ದಾರೆ.
ತನ್ನ ಹಾಗೂ ಕೋಚ್ ನಡುವೆ ಜಗಳಕ್ಕೆ ಕಾರಣರಾಗಿದ್ದಾರೆಂಬುದನ್ನು ಅರಿತು ಟೀಮ್ ಇಂಡಿಯಾದ ಹಿರಿಯ ಆಟಗಾರರೊಬ್ಬರು ಅರೋರಾ ಅವರನ್ನು ಕಳೆದ ಆಗಸ್ಟ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದಲ್ಲಿನ ಪಂದ್ಯಕ್ಕೆ ತೆರಳಿದ ಸಂದರ್ಭ ತರಾಟೆಗೆ ತೆಗೆದುಕೊಂಡಿದ್ದರೆಂದು ತಿಳಿದು ಬಂದಿದೆ. ಆ ಸಂದರ್ಭ ಅರೋರಾ ಸೋದರ ಸಂಬಂಧ ರಿತೇಶ್ ಮಲಿಕ್ ಎಂಬವರು ಅದೇ ಹೊಟೇಲಿನಲ್ಲಿ ತಂಗಿ ಆಟಗಾರರೊಂದಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಬೆರೆಯುತ್ತಿದ್ದರು ಎಂದೂ ಹೇಳಲಾಗಿದೆ.
ಅರೋರಾ ಮೊದಲು ಠಾಕೂರ್ ಅವರ ದಿಲ್ಲಿ ಕಚೇರಿಯಲ್ಲಿ ಎಕ್ಸಿಕ್ಯುಟಿವ್ ಆಗಿ ನೇಮಕಗೊಂಡಿದ್ದರೆ, ನಂತರ ಅವರನ್ನು ಬಿಸಿಸಿಐ ಮೀಡಿಯಾ ಮ್ಯಾನೇಜರ್ ಮಾಡಲಾಗಿತ್ತು.
ಆದರೆ ಅರೋರಾ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.







