ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆಗೆ ಐಸಿಸಿ ನಿರ್ಧಾರ: ಬಿಸಿಸಿಐಗೆ ಆತಂಕ

ದುಬೈ, ಫೆ.4: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ಮುಖ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆ ಮಾಡಲು ಚಿಂತಿಸಲಾಗುತ್ತಿದ್ದು, ಪಂದ್ಯಗಳಿಗೆ ಮತ್ತಷ್ಟು ಆಕರ್ಷಣೆ ತರಲು ಲೀಗ್ ಮಾದರಿಯನ್ನು ಜಾರಿಗೆ ತರಲು ಯೋಚಿಸುತ್ತಿದೆ.
ಶುಕ್ರವಾರದ ಈ ಬೆಳವಣಿಗೆಯು ಬಿಸಿಸಿಐಯನ್ನು ಆತಂಕಕ್ಕೀಡು ಮಾಡಿದೆ. ಐಸಿಸಿ ಹೊಸ ಬದಲಾವಣೆಯತ್ತ ದಿಟ್ಟ ಹೆಜ್ಜೆ ಇಟ್ಟರೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಮುಂಬರುವ 2017ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸಲು ನಿರ್ಧರಿಸುವುದಲ್ಲದೆ, ಎಲ್ಲ ದ್ವಿಪಕ್ಷೀಯ ಸರಣಿಯಿಂದ ದೂರವುಳಿಯಲು ನಿರ್ಧರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾರ್ಯಕಾರಿಣಿ ಸದಸ್ಯರ ಸಭೆಯಲ್ಲಿ ತಮ್ಮನ್ನು ಸೇರಿಸಿಕೊಳ್ಳಲಾಗಿಲ್ಲ. ಕ್ರಿಕೆಟ್ ಮಂಡಳಿಯ ದೃಷ್ಟಿಯಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ, ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು ಬಿಸಿಸಿಐ ಮುಂದಿರುವ ಕೊನೆಯ ಆಯ್ಕೆಯಾಗಿದೆ. ಬಿಸಿಸಿಐ ನಿಜವಾಗಿಯೂ ಐಸಿಸಿ ಮೇಲೆ ಒತ್ತಡ ಹಾಕುವುದೋ, ಅಥವಾ ತನ್ನ ಹಿತಾಸಕ್ತಿ ಕಾಪಾಡಲು ಕಠಿಣ ಹೆಜ್ಜೆ ಇಡಲಿದೆಯೋ ಎಂದು ಕಾದುನೋಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬದಲಾವಣೆ ತರುವ ಬಗ್ಗೆ ಶನಿವಾರ ನಡೆಯಲಿರುವ ಐಸಿಸಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿಲ್ಲ. ಈ ಸಭೆಯಲ್ಲಿ ಐಸಿಸಿಯ ಹೊಸ ಹಣಕಾಸು ಮಾದರಿಯ ಬಗ್ಗೆ ಚರ್ಚೆಯಾಗಬಹುದು. ಇದರಲ್ಲಿ 2014ರಲ್ಲಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಜಾರಿಗೆ ತಂದಿದ್ದ ‘ಬಿಗ್ ತ್ರಿ’ ವ್ಯವಸ್ಥೆ ಯನ್ನು ರದ್ದುಪಡಿಸುವುದೋ ಎಂದು ಗೊತ್ತಾಗಲಿದೆ. ಭಾರತ, ಆಸ್ಟ್ರೆಲಿಯ, ಇಂಗ್ಲೆಂಡ್‌ಗೆ ಐಸಿಸಿ ಆದಾಯದ ಸಿಂಹಪಾಲು ಲಭಿಸಲು ಶ್ರೀನಿವಾಸನ್ ‘ಬಿಗ್ ತ್ರಿ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು.
ಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ 13 ತಂಡಗಳಿರುವ ಎರಡು ಹಂತದ ಟೆಸ್ಟ್ ಲೀಗ್ ನಡೆಸಲು ಪ್ರಸ್ತಾವನೆ ಸಲ್ಲಿಸಿದ್ದು, ಈ ಲೀಗ್ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯುವ ತಂಡಗಳನ್ನು ನಿರ್ಧರಿಸಲಿದೆ. ಪ್ರಮುಖ ಹಂತದ ಲೀಗ್‌ನಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿರುವ ಅಗ್ರ-9 ತಂಡಗಳು ಇರಲಿವೆ. ಝಿಂಬಾಬ್ವೆ, ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳ ಸಹಿತ ಇತರ ಅಸೋಸಿಯೇಟ್ ತಂಡಗಳು ಎರಡನೆ ಹಂತದಲ್ಲಿ ಇರಲಿವೆ







