ತಮಿಳುನಾಡು ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್?
ರವಿವಾರ ಮಹತ್ವದ ಶಾಸಕಾಂಗ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಚೆನ್ನೈ, ಫೆ.4: ಆಡಳಿತಾರೂಢ ಎಐಎಡಿಎಂಕೆ ಪಕ್ಷ ರವಿವಾರ ಚೆನ್ನೈನ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ಕರೆದಿದ್ದು, ಸಭೆಯ ಕಾರ್ಯಸೂಚಿ ಏನೆಂದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬದಲಿಗೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆಂಬ ದಟ್ಟ ವದಂತಿ ಹಬ್ಬಿದೆ.
ತಮಿಳುನಾಡಿನ ‘ಚಿನ್ನಮ್ಮ’ ಎಂದು ಕರೆಯಲ್ಪಡುತ್ತಿರುವ ಶಶಿಕಲಾ ವಿಧಾನಸಭೆಯ ಚುನಾಯಿತ ಸದಸ್ಯರಲ್ಲ. ಆದರೆ, ಡಿಸೆಂಬರ್‌ನಲ್ಲಿ ಜೆ.ಜಯಲಲಿತಾ ನಿಧನರಾದ ಬಳಿಕ ಪಕ್ಷದ ಮುಖ್ಯಸ್ಥೆ ಸ್ಥಾನ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಶಶಿಕಲಾ ಭವಿಷ್ಯದ ಮುಖ್ಯಮಂತ್ರಿಯೆಂದೇ ಬಿಂಬಿತರಾಗಿದ್ದರು.
ಪಕ್ಷದ ಹಿರಿಯ ಮುಖಂಡರು ಮಾಜಿ ಮುಖ್ಯಮಂತ್ರಿ ಜಯಲಲಿತಾರ ಆತ್ಮೀಯ ಗೆಳತಿ, 61ರ ಪ್ರಾಯದ ಶಶಿಕಲಾ ಅವರೇ ಮುಖ್ಯಮಂತ್ರಿ ಆಗಬೇಕೆಂದು ಆಗ್ರಹಿಸುತ್ತಾ ಬಂದಿದ್ದಾರೆ. ಜನವರಿ ಅಂತ್ಯದಲ್ಲಿ ಶಶಿಕಲಾ ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಪೊಂಗಲ್‌ನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯ ವಿರುದ್ಧ ಹೇರಲಾಗಿರುವ ನಿಷೇಧವನ್ನು ಸಂಪೂರ್ಣ ತೆರವುಗೊಳಿಸಬೇಕೆಂದು ಆಗ್ರಹಿಸಿ ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದ ಕಾರಣ ಶಶಿಕಲಾಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಯಲಲಿತಾ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದಾಗ 65ರ ಪ್ರಾಯದ ಓ.ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಜಯಲಲಿತಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಾಗ ಸೆಲ್ವಂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದೀಗ ಅವರು ಚಿನ್ನಮ್ಮನಿಗೆ ಅಧಿಕಾರ ಹಸ್ತಾಂತರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಪಟ್ಟದಿಂದ ಇಳಿಯಬೇಕಾಗಿದೆ.
ಸುಮಾರು 27 ವರ್ಷಗಳ ಕಾಲ ಜಯಲಲಿತಾರ ಕೈಯ್ಯಲ್ಲಿದ್ದ ಎಐಎಡಿಎಂಕೆ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ತನ್ನ ಕೈವಶಮಾಡಿಕೊಳ್ಳಲು ಯಶಸ್ವಿಯಾಗಿದ್ದ ಶಶಿಕಲಾ, ಕಳೆದ ವಾರ ಜಯಲಲಿತಾ ಪಾಲಿಸುತ್ತಿದ್ದ ಸಂಪ್ರದಾಯದಂತೆ ಕೇಂದ್ರ ಹಾಗೂ ರಾಜ್ಯದ ಬಜೆಟ್ ಅಧಿವೇಶನದ ಮೊದಲು ಪಾರ್ಟಿಯ ಎಂಎಲ್‌ಎಗಳು ಹಾಗೂ ಎಂಪಿಗಳ ಸಭೆಯನ್ನು ನಡೆಸಿದ್ದರು.







