ಗಣಿತದ ನೊಬೆಲ್ ‘ಫೀಲ್ಡ್ಸ್’ ಪದಕ ಪಡೆದ ಮೊದಲ ಮಹಿಳೆ ಮರ್ಯಮ್ ಮಿರ್ಝಾಖನಿ

ಗಣಿತಶಾಸ್ತ್ರದಲ್ಲಿ ನೀಡಲಾಗುವ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗುವ ‘ಫೀಲ್ಡ್ಸ್’ ಪದಕವನ್ನು ಪಡೆದಿರುವ ಗಣಿತ ಪ್ರೊಫೆಸರ್ ಮರ್ಯಮ್ ಮಿರ್ಝಾಖನಿ, 78 ವರ್ಷಗಳಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
‘ಅಡ್ವಾನ್ಸಸ್ ಇನ್ ದ ತಿಯರಿ ಆಫ್ ರೀಮನ್ ಸರ್ಫೇಸಸ್ ಆ್ಯಂಡ್ ದೆಯರ್ ಮಾಡ್ಯುಲಿ ಸ್ಪೇಸಸ್’ ಎಂಬ ಅಮೋಘ ಕೃತಿಗಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಫೀಲ್ಡ್ಸ್ ಪದಕವನ್ನು ಅಂತಾರಾಷ್ಟ್ರೀಯ ಗಣಿತ ಒಕ್ಕೂಟ ನಾಲ್ಕು ವರ್ಷಗಳಲ್ಲಿ ಒಮ್ಮೆ ನೀಡುತ್ತದೆ. ಈವರೆಗೆ, ಕೇವಲ 54 ಪುರುಷರು ಮತ್ತು ಓರ್ವ ಮಹಿಳೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.
‘‘ಇದೊಂದು ಶ್ರೇಷ್ಠ ಗೌರವ. ಇದು ಯುವ ಮಹಿಳಾ ವಿಜ್ಞಾನಿಗಳು ಮತ್ತು ಗಣಿತಶಾಸ್ತ್ರಜ್ಞೆಯರಿಗೆ ಸ್ಫೂರ್ತಿಯಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ಮುಂದಿನ ವರ್ಷಗಳಲ್ಲಿ ಈ ರೀತಿಯ ಪ್ರಶಸ್ತಿಗಳನ್ನು ತುಂಬಾ ಮಹಿಳೆಯರು ಗೆಲ್ಲುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಇದು ತರಗತಿಗಳಲ್ಲಿ ಕಲಿಯುವ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ಇದು ನಿಮ್ಮನ್ನು ಉತ್ತೇಜಿಸಿ ನಿಮ್ಮನ್ನು ಹೊಸ ವಿಷಯಗಳನ್ನು ಕಲಿಯುವಂತೆ ಪ್ರೇರೇಪಿಸುವ ಸಂಗತಿಗೆ ಸಂಬಂಧಿಸಿದ್ದಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಮರ್ಯಮ್ ಹೇಳಿದ್ದಾರೆ.
ಇರಾನ್ ಸಂಜಾತ 39 ವರ್ಷದ ಮರ್ಯಮ್ ಈಗ ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಪ್ರೊಫೆಸರ್ ಆಗಿದ್ದಾರೆ. 2014 ಆಗಸ್ಟ್ 13ರಂದು ಅವರಿಗೆ ಫೀಲ್ಡ್ಸ್ ಪ್ರಶಸ್ತಿ ಲಭಿಸಿದೆ.







