ಪುತ್ತೂರು: ಕಾರು, ಸ್ಕೂಟರ್ ಢಿಕ್ಕಿ; ಸ್ಕೂಟರ್ ಸವಾರ ಸಾವು

ಮೃತ ಆಸಿಫ್
ಪುತ್ತೂರು ,ಫೆ . 4 : ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿ ಆಕ್ಟೀವಾ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಮಾಣಿ- ಸಂಪಾಜೆ ರಾ.ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಸಹಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಟೆರಾನೋ ಕಾರು ಮತ್ತು ಆಕ್ಟಿವಾ ಮಧ್ಯೆ ಶೇಕಮಲೆ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಆಕ್ಟಿವಾ ಸವಾರ ಮಿತ್ತೂರು ನಿವಾಸಿ ಮೋನು ಎಂಬವರ ಪುತ್ರ ಆಸಿಫ್ (18) ಮೃತಪಟ್ಟವರು. ಹಿಂಬದಿ ಸವಾರ ಕೊಡಾಜೆ ನಿವಾಸಿ ಅದ್ನಾನ್ (20) ಗಂಭೀರ ಗಾಯಗೊಂಡಿದ್ದಾರೆ.
ಇವರಿಬ್ಬರೂ ಕೂಲಿ ಕಾರ್ಮಿಕರಾಗಿದ್ದು ಸುಳ್ಯಕ್ಕೆ ಕೆಲಸದ ನಿಮಿತ್ತ ತೆರಳಿದ್ದರು. ಕೆಲಸ ಮುಗಿಸಿ ತಮ್ಮ ಮನೆಗೆ ವಾಪಸ್ಸಾಗುವ ವೇಳೆ ಶೇಕಮಲೆಯಲ್ಲಿ ಈ ದುರಂತ ಸಂಭವಿಸಿದೆ. ಢಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದು ಮಾತ್ರವಲ್ಲದೆ ಕಾರು ಆಕ್ಟಿವಾವನ್ನು ಸುಮಾರು 10 ಮೀಟರ್ ಎಳೆದುಕೊಂಡು ಹೋಗಿದ್ದು ರಸ್ತೆ ಬದಿಯ ಕಬ್ಬಿಣದ ತಡೆಬೇಲಿಗೆ ಮತ್ತೆ ಢಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿ ಸವಾರ ಅದ್ನಾನ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ , ಇದರಿಂದ ಆತನ ಕಾಲು ಮುರಿತಕ್ಕೊಳಗಾಗಿದೆ. ಆಸಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದೇ ತಿರುವಿನಲ್ಲಿ ಈ ಹಿಂದೆ ಕೆಲವು ಅಪಘಾತಗಳು ಸಂಭವಿಸಿದೆ , ಆದರೆ ಜೀವಕ್ಕೆ ಹಾನಿಯಾಗಿರಲಿಲ್ಲ. ಅಪಾಯಕಾರಿ ತಿರುವು ಆಗಿರುವ ಕಾರಣ ಘನ ವಾಹನಗಳು ಇಲ್ಲಿ ನಿಯಂತ್ರಣಕ್ಕೆ ಸಿಗದ ಕಾರಣ ಅಪಘಾತ ಉಂಟಾಗುತ್ತಿದೆ. ಎರಡೂ ಕಡೆಗಳಲ್ಲಿ ಒಂದೇ ರೀತಿಯ ತಿರುವು ಇರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







