ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಧೋನಿ ಭೇಟಿ
ಶಿಕ್ಷಣ-ಕ್ರೀಡೆಯ ಸಮತೋಲನದ ಪ್ರಾಮುಖ್ಯದ ಬಗ್ಗೆ ಕಿವಿಮಾತು

ಹೊಸದಿಲ್ಲಿ, ಫೆ.4: ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ವೀರೇಂದ್ರ ಸೆಹ್ವಾಗ್ ಒಡೆತನದ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಭೇಟಿ ನೀಡಿದರು. ಇಬ್ಬರು ಕ್ರಿಕೆಟ್ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ಈ ಕ್ಷಣ ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಕೆರಳಿಸಿತ್ತು.
ವಿದ್ಯಾರ್ಥಿಗಳೊಂದಿಗೆ ಬೆರೆತ ಧೋನಿ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡರು. ಕ್ರೀಡೆಯ ಮಹತ್ವ ಹಾಗೂ ತನ್ನ ಶಾಲಾ ದಿನಗಳ ನೆನಪನ್ನು ವಿದ್ಯಾರ್ಥಿಗಳ ಮುಂದಿಟ್ಟರು.
‘‘ಒತ್ತಡವಿಲ್ಲದ ಸ್ಥಳವೆಂದರೆ ಅದು ಶಾಲೆ...ಈ ಒಂದು ಸ್ಥಳದಲ್ಲಿ ನಮಗೆ ಸಾಕಷ್ಟು ಮನರಂಜನೆ ಸಿಗುತ್ತದೆ. ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಸರಿಯಾದ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಯಶಸ್ಸಾದರೆ ಮಾತ್ತ ನಾವು ಎಷ್ಟು ಉತ್ತಮವಾಗಿದ್ದೇವೆಂದು ತಿಳಿಯುತ್ತದೆ’’ ಎಂದು ಧೋನಿ ಹೇಳಿದರು.
‘‘ನಾನು ಪಂದ್ಯವೊಂದಕ್ಕೆ ಆಯ್ಕೆಯಾಗದಿದ್ದರೆ ಆ ಬಗ್ಗೆ ಚಿಂತಿಸುವುದಿಲ್ಲ. ಏಕೆಂದರೆ ಆಯ್ಕೆ ನಮ್ಮ ಕೆಲಸವಲ್ಲ ಎಂದು ನನಗೆ ಗೊತ್ತಿದೆ. ಇದು ಬೇರೊಬ್ಬರ ಕೆಲಸ. ಅದು ನಮ್ಮ ಹಿಡಿತದಲ್ಲಿರುವುದಿಲ್ಲ. ಕ್ರೀಡಾ ತರಬೇತಿಯಲ್ಲಿ ನಾವು ಕಳೆಯುವ ಸಮಯ ಹಾಗೂ ಶಿಕ್ಷಣದ ಅಭ್ಯಾಸದಲ್ಲಿ ನಾವು ಕಳೆಯುವ ಸಮಯ ನಿಮ್ಮ ಕೈಯಲ್ಲೇ ಇರುತ್ತದೆ’’ ಎಂದು ಧೋನಿ ಹೇಳಿದರು.
ಇದೇ ವೇಳೆ, ಧೋನಿ ಅವರು ವಿಕೆಟ್‌ಕೀಪಿಂಗ್ ಕೌಶಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 2011ರ ವಿಶ್ವಕಪ್ ವಿಜೇತ ತಂಡದ ನಾಯಕ ಧೋನಿ ಶ್ರೇಷ್ಠ ವಿಕೆಟ್‌ಕೀಪರ್‌ಗಳಲ್ಲಿ ಓರ್ವರಾಗಿದ್ದು, ಚುರುಕಿನ ಕೀಪಿಂಗ್‌ಗೆ ಜನಪ್ರಿಯರಾಗಿದ್ದಾರೆ.







