ಸೋಮವಾರದಿಂದ ಜಂಟಿ ಅಧಿವೇಶನ ಆರಂಭ
ಬೆಂಗಳೂರು, ಫೆ. 4: ವಿಧಾನ ಮಂಡಲದ ವರ್ಷದ ಮೊದಲ ಅಧಿವೇಶನ ಫೆ.6ರಿಂದ ಆರಂಭಗೊಳ್ಳಲಿದ್ದು, ಫೆ.10ರ ವರೆಗೆ ನಡೆಯಲಿದೆ. ಮೊದಲ ದಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ನಂತರ ಉಭಯ ಸದನಗಳು ಪ್ರತ್ಯೇಕವಾಗಿ ಸೇರಲಿದ್ದು, ಸಚಿವ ಮಹದೇವ ಪ್ರಸಾದ್ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ನಂತರ ದಿನದ ಕಲಾಪವನ್ನು ಮುಂದೂಡಲಾಗುವುದು ಎಂದು ತಿಳಿಸಿದರು.
ಫೆ.7ರಿಂದ ಪ್ರಶ್ನೋತ್ತರ ಕಲಾಪಗಳು ಆರಂಭವಾಗಲಿದ್ದು, ಪ್ರಸ್ತುತ ವಿಧಾನ ಪರಿಷತ್ತಿನ ಅಧಿವೇಶನಕ್ಕೆ 390 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 84 ಚುಕ್ಕೆ ರಹಿತ ಪ್ರಶ್ನೆಗಳನ್ನು ಈವರೆಗೆ ಸ್ವೀಕರಿಸಲಾಗಿದೆ ಎಂದ ಅವರು, ಸ್ವೀಕೃತ ಚುಕ್ಕೆ ಗುರುತಿನ ಪ್ರಶ್ನೆಗಳಲ್ಲಿ ಬ್ಯಾಲೆಟ್ ಮೂಲಕ 60 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳಾಗಿ ಹಾಗೂ ಉಳಿದವುಗಳನ್ನು ಚುಕ್ಕೆ ರಹಿತ ಪ್ರಶ್ನೆಗಳಾಗಿ ಪರಿಗಣಿಸಲಾಗಿದೆ ಎಂದು ವಿವರ ನೀಡಿದರು.
ಈವರೆಗೆ 62 ಗಮನ ಸೆಳೆಯುವ ಸೂಚನೆಗಳನ್ನು ಹಾಗೂ ನಿಯಮ 330 ರ ಅಡಿ 13 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದ ಶಂಕರಮೂರ್ತಿ, ಅಧಿವೇಶನದ ಅವಧಿ ಹೆಚ್ಚು ದಿನ ನಡೆಯಬೇಕು. ಹೆಚ್ಚು ದಿನ ಅಧಿವೇಶನ ನಡೆದಲ್ಲಿ ಪ್ರಶ್ನೋತ್ತರ ಅವಧಿ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಪೂರ್ಣವಾಗಿ ಚರ್ಚಿಸಲು ಸಾಧ್ಯ ಎಂದರು.‘ವರ್ಷದ ಆರಂಭಿಕ ಅಧಿವೇಶನ ಕೇವಲ 5ದಿನಗಳ ಬದಲಿಗೆ ಕನಿಷ್ಠ ಹದಿನೈದು ದಿನಗಳ ಕಾಲ ನಡೆಸಬೇಕು.
2015ರಲ್ಲಿ 59ದಿನ, 2016ರಲ್ಲಿ ಕೇವಲ 34ದಿನಗಳಷ್ಟೇ ಕಲಾಪ ನಡೆದಿದೆ. ವರ್ಷಕ್ಕೆ ಕನಿಷ್ಠ 60ದಿನ ಅಧಿವೇಶನ ನಡೆಸಬೇಕೆಂಬ ನಿಯಮ ರೂಪಿಸಲಾಗಿದೆ. ಹೆಚ್ಚು ದಿನ ಅಧಿವೇಶನ ನಡೆಸಲು ಸರಕಾರ ಕ್ರಮ ವಹಿಸಬೇಕು, ಆ ನಿಟ್ಟಿನಲ್ಲಿ ವಿಪಕ್ಷಗಳು, ಎಲ್ಲ ಸದಸ್ಯರು ಸಹಕರಿಸಬೇಕು’
-ಡಿ.ಎಚ್.ಶಂಕರಮೂರ್ತಿಮೇಲ್ಮನೆ ಸಭಾಪತಿ









