ಹೆಜ್ಜೇನು ದಾಳಿಗೆ ಒಂದು ಗಂಟೆ ಕ್ರಿಕೆಟ್ ಪಂದ್ಯ ಸ್ಥಗಿತ!

ಜೋಹಾನ್ಸ್‌ಬರ್ಗ್, ಫೆ.4: ಅಕಾಲಿಕ ಮಳೆ ಸುರಿದರೆ, ಮೈದಾನದೊಳಗೆ ಶ್ವಾನ ಪ್ರವೇಶಿಸಿ ಉಪದ್ರ ನೀಡಿದರೆ ಕ್ರಿಕೆಟ್ ಪಂದ್ಯ ನಿಲ್ಲುವುದು ಸಾಮಾನ್ಯ ಸಂಗತಿ. ಆದರೆ, ದಕ್ಷಿಣ ಆಫ್ರಿಕದ ವಾಂಡರರ್ಸ್ ಸ್ಟೇಡಿಯಂನಲ್ಲಿ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಆತಿಥೇಯ ದಕ್ಷಿಣ ಆಫ್ರಿಕ ಹಾಗೂ ಶ್ರೀಲಂಕಾ ನಡುವಿನ 3ನೆ ಏಕದಿನ ಪಂದ್ಯ ಸುಮಾರು ಒಂದು ಗಂಟೆ ಕಾಲ ಸ್ಥಗಿತಗೊಂಡಿರುವ ಘಟನೆ ಶನಿವಾರ ಇಲ್ಲಿ ನಡೆದಿದೆ.
ಹೆಜ್ಜೇನು ದಾಳಿ ನಡೆಸಿದಾಗ ಬ್ಯಾಟಿಂಗ್ ಮಾಡುತ್ತಿದ್ದ ಶ್ರೀಲಂಕಾ ತಂಡ 26.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 117 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕ-ಲಂಕಾ ನಡುವಿನ ಪಂದ್ಯಕ್ಕೆ ಹೆಜ್ಜೇನು ದಾಳಿ ನಡೆಸಿದಾಗ 2008ರಲ್ಲಿ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಘಟನೆ ನೆನಪಿಗೆ ಬಂತು.
ಹೆಜ್ಜೇನು ದಾಳಿ ಮಾಡಿದಾಗ ಉಭಯ ತಂಡಗಳ ಆಟಗಾರರು ಮೈದಾನವನ್ನು ತೊರೆದರು. ‘ಹೆಜ್ಜೇನು ಮೈದಾನದಿಂದ ಹೊರಹೋಗುವ ತನಕ ಪಂದ್ಯವನ್ನು ನಿಲ್ಲಿಸಲಾಗುವುದು’ ಎಂದು ಸ್ಟೇಡಿಯಂನ ದೊಡ್ಡ ಪರದೆಯಲ್ಲಿ ಸಂದೇಶ ಬಿತ್ತರಿಸಲಾಯಿತು.
ವಾಂಡರರ್ಸ್ ಸ್ಟೇಡಿಯಂನ ಮೈದಾನದ ಸಿಬ್ಬಂದಿಗಳು ಬಿಳಿ ಹೊಗೆ ಸಿಂಪಡಿಸುವ ಮೂಲಕ ಹೆಜ್ಜೇನು ಓಡಿಸಲು ವಿಫಲ ಯತ್ನ ನಡೆಸಿದರು. ವೃತ್ತಿಪರ ಜೇನು ಸಾಕಾಣೆಗಾರರು ಜೇನು ತುಂಬಿದ ಕಂಟೈನರ್ ಹಿಡಿದುಕೊಂಡು ಮೈದಾನಕ್ಕೆ ಬಂದಿದ್ದು, ಅವರು ಜೇನು ಓಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.







