ಕ್ಯಾನ್ಸರ್ ಪೀಡಿತ ಬಾಕ್ಸರ್ ಡಿಂಕೊಗೆ ಕೇಂದ್ರದಿಂದ ನೆರವಿನ ಭರವಸೆ
ಚಿಕಿತ್ಸೆ ವೆಚ್ಚ ಭರಿಸಲು ಮನೆ ಮಾರಿದ್ದ ಮಣಿಪುರದ ಬಾಕ್ಸರ್

ಹೊಸದಿಲ್ಲಿ, ಫೆ.4: ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿರುವ 1998ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ದಯನೀಯ ಸ್ಥಿತಿ ಬಗ್ಗೆ ವರದಿಯಾದ ಬಳಿಕ ಎಚ್ಚ್ಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಸಹಾಯ ಹಸ್ತ ನೀಡುವ ಭರವಸೆ ನೀಡಿದೆ.
ಡಿಂಕೊ ಸಿಂಗ್ ಸಂಪೂರ್ಣ ಚೇತರಿಸಿಕೊಳ್ಳಲು ಸರಕಾರದಿಂದ ಸಾಧ್ಯವಿರುವ ಎಲ್ಲ ಸಹಾಯಹಸ್ತವನ್ನು ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೊಯೆಲ್ ಹೇಳಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿರುವ ಡೆಂಕೊ ಸಿಂಗ್ ಕಳೆದ ತಿಂಗಳು ತನ್ನ ಚಿಕಿತ್ಸೆಯ ವೆಚ್ಚಭರಿಸಲು ಇಂಪಾಲದಲ್ಲಿರುವ ಮನೆಯನ್ನು 10 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಆಪರೇಶನ್‌ನ ವೇಳೆ 70 ಶೇ. ಲಿವರ್‌ನ್ನು ಕತ್ತರಿಸಲಾಗಿದೆ.
‘‘ಮಣಿಪುರದ ಬಾಕ್ಸರ್‌ಗೆ ಸರಕಾರ ಎಲ್ಲ ರೀತಿಯ ಆರ್ಥಿಕ ನೆರವು ನೀಡಲಿದೆ. ಅವರು ಬಯಸುವ ಎಲ್ಲ ಚಿಕಿತ್ಸೆಯನ್ನು ನೀಡಲಾಗುತ್ತದೆ. ಡಿಂಕೊ ಇಂಪಾಲದ ಸಾಯ್ ಕೇಂದ್ರದಲ್ಲಿ ಕೋಚ್ ಆಗಿದ್ದು, ಅವರನ್ನು ಭೇಟಿಯಾಗಿ ನೆರವಿನಿಂದ ಭರವಸೆ ನೀಡಿರುವೆ. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ’’ ಎಂದು ಸರಣಿ ಟ್ವೀಟ್ ಮಾಡಿರುವ ಗೊಯೆಲ್ ತಿಳಿಸಿದ್ದಾರೆ.
ನೌಕಾಪಡೆಯ ಮಾಜಿ ನೌಕರ, ಇಬ್ಬರು ಮಕ್ಕಳ ತಂದೆಯಾಗಿರುವ ಸಿಂಗ್ ಸಾಯ್ ಕೇಂದ್ರದಿಂದ 50,000 ರೂ. ಮುಂಗಡ ಹಣ ಪಡೆದಿದ್ದಾರೆ. 38ರ ಹರೆಯದ ಸಿಂಗ್ ಅವರು ಕಿಮೋಥೆರಪಿ ಚಿಕಿತ್ಸೆ ಶೀಘ್ರವೇ ಆರಂಭವಾಗಲಿದೆ.
ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ಬಾಕ್ಸರ್
ಬ್ಯಾಂಕಾಕ್‌ನಲ್ಲಿ 1998ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ತನ್ನ 19ರ ಹರೆಯದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದ ಡಿಂಕೊ ಸಿಂಗ್ ಭಾರತಕ್ಕೆ ಮರಳಿದ ಬಳಿಕ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಸರಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ ಸಿಂಗ್‌ಗೆ ಇಂಪಾಲದಲ್ಲಿ ಮೂರು ಬೆಡ್‌ರೂಮ್ ಮನೆ ಉಡುಗೊರೆಯಾಗಿ ಲಭಿಸಿತ್ತು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಡಿಂಕೊ ಸಿಂಗ್ ಬಳಿ ಈಗ ಪದಕಗಳಿವೆ ಹಾಗೂ ಸಾಯ್ ಕೇಂದ್ರದಲ್ಲಿ ಕೋಚ್ ಹುದ್ದೆಯೂ ಇದೆ. ಆದರೆ, ಕಳೆದ ನಾಲ್ಕು ತಿಂಗಳಲ್ಲಿ ಅವರು ಮನೆಯನ್ನು ಮಾರಾಟ ಮಾಡಿದ್ದಾರೆ. ಅವರನ್ನು ಬಾಧಿಸುತ್ತಿರುವ ಕ್ಯಾನ್ಸರ್‌ನಿಂದಾಗಿ ಅವರ ಲಿವರ್‌ನ ಶೇ.70ರಷ್ಟು ಭಾಗ ಹಾನಿಯಾಗಿದೆ. ಇದೀಗ ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಡಿಂಕೊ ಪ್ರಸ್ತುತ ದಿಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ.6 ರಂದು 14 ಗಂಟೆಗಳ ಕಾಲ ನಡೆದ ಲಿವರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದಿಲ್ಲಿಯ ಶಾಹಪುರದ ಜಾಟ್ ಹಳ್ಳಿಯಲ್ಲಿ ಗೆಳೆಯ ಮೂರು ಕೊಠಡಿಯ ಬಾಡಿಗೆಯ ಫ್ಲ್ಯಾಟ್‌ನಲ್ಲಿ ಪತ್ನಿ ಹಾಗೂ ಇಬ್ಬರ ಮಕ್ಕಳೊಂದಿಗೆ ನೆಲೆಸಿದ್ದಾರೆ.







