19.30 ಲಕ್ಷ ರೂ. ಅಮಾನ್ಯ ನೋಟುಗಳೊಂದಿಗೆ ಉದ್ಯಮಿ ಸಹಚರನ ಬಂಧನ

ಜೈಪುರ,ಫೆ.4: 19.30 ಲಕ್ಷ ರೂ. ವೌಲ್ಯದ ಅಮಾನ್ಯಗೊಂಡ ನೋಟುಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹದಳವು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಓರ್ವ ಉದ್ಯಮಿ ಹಾಗೂ ಆತನ ಇಬ್ಬರು ಸಹಚರರು, 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಹಳೆಯ ನಿಷೇಧಿತ ನೋಟುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆಂಬ ಮಾಹಿತಿ ತಮಗೆ ದೊರೆತಿತ್ತೆಂದು, ಜೈಪುರದ ಪೊಲೀಸ್ ಅಧೀಕ್ಷಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳವು ಓರ್ವ ನಕಲಿ ಮಧ್ಯವರ್ತಿಯನ್ನು ಕಳುಹಿಸಿ, ಉದ್ಯಮಿಯ ಸಹಚರ ಓಂ ಪ್ರಕಾಶ್ ಎಂಬಾತನನ್ನು ನೋಟು ಸಮೇತ ಹಿಡಿಯಲು ಸಫಲವಾಗಿತ್ತು. ಆರೋಪಿ ಉದ್ಯಮಿಯು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಬಲೆಬೀಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
Next Story





