ಕೊಯಮತ್ತೂರಿನಲ್ಲಿ ಇನ್ನೂ ನಾಲ್ವರಿಗೆ ಎಚ್1ಎನ್1

ಕೊಯಮತ್ತೂರು,ಫೆ.4: ಇಲ್ಲಿ ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿ ಮಾರಣಾಂತಿಕ ಎಚ್1ಎನ್1 ವೈರಸ್ (ಸ್ವೆನ್ ಫ್ಲೂ)ನ ಹರಡುವಿಕೆಯನ್ನು ತಡೆಯಲು ತಮಿಳುನಾಡು ಸರಕಾರವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ, ಈ ಸೋಂಕು ರೋಗದಿಂದ ಬಾಧಿತರಾಗಿರುವ ಇನ್ನೂ ನಾಲ್ಕು ಮಂದಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಬಗ್ಗೆ ವರದಿಗಳು ಬಂದಿವೆ.
ಈಗಾಗಲೇ ಆಸ್ಪತ್ರೆಯಲ್ಲಿ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಸಂಜೆ ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ ನಾಲ್ವರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆಂದು ಕೊಯಮತ್ತೂರು ಸರಕಾರಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ನಾಲ್ಕು ಮಂದಿಗೂ ಎಚ್1ಎನ್1 ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರೆಲ್ಲರನ್ನೂ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಆದಾಗ್ಯೂ ಈ ರೋಗದ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಅವರ ಹೇಳಿದ್ದಾರೆ. ಈ ಮಾರಣಾಂತಿಕ ರೋಗವು ಕಳೆದ ಹತ್ತು ದಿನಗಳಲ್ಲಿ ಸೇಲಂನ ಹತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರನ್ನು ಬಲಿತೆಗೆದುಕೊಂಡಿದೆ.





