ಪದ್ಮಾವತಿ ವಿವಾದ : ಸೃಜನಶೀಲನಿರ್ದೇಶಕನಿಗೆ ಸವಾಲ್

ಸಂಜಯ್‌ಲೀಲಾ ಬನ್ಸಾಲಿ ಇದೀಗ ‘ಕರ್ನಿಸೇನಾ’ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿ ಸುದ್ದಿಯಲ್ಲಿದ್ದಾರೆ. ರಾಣಿ ಪದ್ಮಿನಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಪ್ರಣಯ ಸನ್ನಿವೇಶವನ್ನು ಬಿಂಬಿಸುವ ಮೂಲಕ ರಜಪೂತ ಇತಿಹಾಸ ತಿರುಚಿದ್ದಾರೆ ಎಂದು ಆರೋಪಿಸಿ ಈ ಸಂಘಟನೆ ಕಾನೂನು ಕೈಗೆತ್ತಿಕೊಂಡಿದೆ. ಈ ವದಂತಿಯಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದನ್ನೂ ಅರಿತುಕೊಳ್ಳದೇ ಈ ಹಲ್ಲೆ ನಡೆಸಿದೆ.
ಸಿನಿಮಾವೊಂದರಲ್ಲಿ ಇತಿಹಾಸವನ್ನು ಮರು ಸೃಷ್ಟಿಸುವ ಸಂದರ್ಭದಲ್ಲಿ ನಿರ್ದೇಶಕ ಎದುರಿಸಬೇಕಾದ ಸೃಜನಶೀಲ ಸವಾಲುಗಳು ಈ ಮೂಲಕ ಮರುಚರ್ಚೆಗೆ ಒಳಗಾಗಿದೆ ಎನ್ನಬಹುದು.
ಮೂಲಭೂತವಾಗಿ ನೀವು ಅಪ್ಪಟ ಇತಿಹಾಸದ ಪಾಠವನ್ನೇ ಚಲನಚಿತ್ರದಲ್ಲೂ ಕಾಣಬೇಕಾದರೆ, ಸಾಕ್ಷ್ಯ ಚಿತ್ರ ವೀಕ್ಷಿಸಬೇಕು. ಕಥಾಚಿತ್ರಗಳು ಇರುವುದೇ ಮನೋರಂಜನೆಗೆ; ಇಲ್ಲಿ ಅಲಂಕಾರಗಳು ಅಸಾಮಾನ್ಯವೇನಲ್ಲ. ಉದಾಹರಣೆಗೆ ಆಮಿರ್ ಖಾನ್ ಅವರ ‘ದಂಗಲ್’ ಚಿತ್ರ. ಇದು ಕುಸ್ತಿಪಟು ಮಹಾವೀರ್‌ಸಿಂಗ್ ಫೋಗತ್ ಹಾಗೂ ಮಕ್ಕಳಾದ ಗೀತಾ ಹಾಗೂ ಬಬಿತ್ ಅವರ ಕುರಿತ, ಅಂತಾರಾಷ್ಟ್ರೀಯ ಕುಸ್ತಿ ಅಖಾಡಾಕ್ಕೆ ಅವರ ಪಯಣದ ಯಶೋಗಾಥೆಗಳನ್ನು ಬಿಂಬಿಸುವ ಚಿತ್ರ.
ನೀವು ಚಿತ್ರ ವೀಕ್ಷಿಸಿದರೆ, ಗೀತಾ ಅವರ ತರಬೇತುದಾರನನ್ನು ಅಸಮರ್ಥ ಹಾಗೂ ಮೊಂಡು ವ್ಯಕ್ತಿಯಾಗಿ, ಬಹುತೇಕ ಖಳನಾಯಕನಾಗಿ ಬಿಂಬಿಸಲಾಗಿದ್ದು, ಮಕ್ಕಳ ಕಾಮನ್ವೆಲ್ತ್ ಫೈನಲ್‌ನಲ್ಲಿ ತಂದೆ ಮಹಾವೀರ ಅವರನ್ನು ದ್ವಾರಪಾಲಕನಂತೆ ಚಿತ್ರಿಸಲಾಗಿದೆ.
ವಾಸ್ತವವಾಗಿ ಅವರ ಕೋಚ್ ಆಗಿದ್ದ ಪಿ.ಆರ್.ಸೋಧಿ ಚಿತ್ರದಲ್ಲಿ ಪಿ.ಆರ್.ಕದಂ ಆಗಿದ್ದಾರೆ. ಏಕೆಂದರೆ ಅವರ ಮಹತ್ವವನ್ನು ಚಿತ್ರ ಅಷ್ಟಾಗಿ ಪರಿಗಣಿಸಿಲ್ಲ. ಪ್ರತಿಯೊಬ್ಬರೂ ಆ ಚಿತ್ರಣವನ್ನು ಸಮರ್ಥಿಸಿಕೊಂಡಿದ್ದಾರೆ. ಚಿತ್ರದ ವಾಸ್ತವ ಚಿತ್ರಣವನ್ನು ಆರಂಭದಲ್ಲೇ ಅಲ್ಲಗಳೆಯಲಾಗಿದೆ.
ಬಾರ್ಡ್, ವಿಲಿಯಂ ಶೇಕ್ಸ್‌ಪಿಯರ್‌ನಂಥವರು ಕೂಡಾ ಕಲಾತ್ಮಕ ಸ್ವಾತಂತ್ರ್ಯ ಬಳಸಿಕೊಂಡಿದ್ದಾರೆ. ಜೂಲಿಯಸ್ ಸೀಸರ್, ಶೇಕ್ಸ್‌ಪಿಯರ್‌ಗಿಂತ ಶತಮಾನದಷ್ಟು ಹಿಂದೆ ವಾಸವಿದ್ದ ವ್ಯಕ್ತಿ; ರೋಮನ್ ಚಕ್ರವರ್ತಿಗೆ ಎಷ್ಟು ಬಾರಿ ಇರಿದು ಕೊಲೆ ಮಾಡಲಾಗಿದೆ ಎನ್ನುವುದು ಆತನಿಗೆ ಸ್ಪಷ್ಟವಾಗಿ ಹೇಗೆ ಗೊತ್ತಿರಲು ಸಾಧ್ಯ?
ಪದ್ಮಾವತಿ ವಿಚಾರಕ್ಕೆ ಬಂದರೆ ಅಷ್ಟೊಂದು ಸೂಕ್ಷ್ಮ ಗಮನ ಏಕೆ? ನೀವು ಇತಿಹಾಸ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ‘ಸ್ವಾತಂತ್ರ್ಯ ಹೋರಾಟಗಾರ’ ಮತ್ತೊಬ್ಬನ ಪಾಲಿಗೆ ‘ಭಯೋತ್ಪಾದಕ’ ಎನಿಸಬಹುದು. ಇತಿಹಾಸ ಎಂದಾದರೂ, ಇಂಥ ‘ರಶೋಮೊನ್’ ಪರಿಣಾಮದಿಂದ ಮುಕ್ತವಾಗಿದೆಯೇ? ಅಕಿರಾ ಕುರೊಸಾವಾ ಅವರ ಐತಿಹಾಸಿಕ ಚಿತ್ರದ ಹಿನ್ನೆಲೆಯಲ್ಲಿ ಈ ಪದ ಬಳಕೆಯಾಗುತ್ತಿದ್ದು, ಸತ್ಯದ ಸ್ವರೂಪ, ಮನೋಭಾವದ ವಿಷಯನಿಷ್ಠತೆಗೆ ಅನುಗುಣವಾಗಿ ಬದಲಾಗುತ್ತದೆ; ಇದು ವಿಭಿನ್ನ ಆದರೆ ಸಂಪೂರ್ಣ ನಂಬಲೇಬೇಕಾದಂತಹ ಚಿತ್ರಣವನ್ನು ಕಟ್ಟಿಕೊಡುತ್ತದೆ ಎನ್ನುವುದು ವಾಸ್ತವ.
‘ಅಕ್ಬರ್ ದ ಗ್ರೇಟ್’ ಚಿತ್ರ ಎಲ್ಲ ನಂಬಿಕೆಯ ವ್ಯಕ್ತಿಗಳಿಗೂ ಮುಕ್ತಚಿಂತನೆಯ ಚಿತ್ರ ಎಂಬ ಹೊಗಳಿಕೆಗೆ ಪಾತ್ರವಾಗಿದೆ. ಈ ಕಲಾಪೋಷಕ, ದಯಾಳು ಚಕ್ರವರ್ತಿ ಎಂದು ಬಿಂಬಿತವಾಗಿದೆ. ಆದರೆ ಆತ ಹಾಗಿದ್ದನೇ? ಆತನ ಸೇನಾ ದಾಳಿಯ ವೇಳೆ ಸಾವಿರಾರು ಮಂದಿ ಹತ್ಯೆಯಾದರು. ಆತನ ಸರ್ವಶ್ರೇಷ್ಠತೆಯನ್ನು ಅಲ್ಲಗಳೆಯುವವರ ಬಗ್ಗೆ ಆತ ಯಾವ ದಯೆಯನ್ನೂ ತೋರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಆತನಿಗೆ ಶರಣಾಗಲಿಲ್ಲ ಎಂಬ ಕಾರಣಕ್ಕೆ ಚಿತ್ತೂರಿನ ಎಲ್ಲ ನಿವಾಸಿಗಳನ್ನು ಆತ ಸಾಮೂಹಿಕವಾಗಿ ಹತ್ಯೆ ಮಾಡಿದ್ದ. ಅಂದರೆ ಇತಿಹಾಸದ ಯಾವ ಅಂಶವನ್ನು ನೀವು ನಂಬುತ್ತೀರಿ? ಆತ ದಯಾಳು ಅರಸ ಎಂದೇ ಅಥವಾ ನಿರ್ದಯಿ ದೇಶದ್ರೋಹಿ ಎಂದೇ?

ವಿವಾದ ದುರ್ಗಾದೇವಿಯನ್ನು ಕೂಡಾ ಬಿಟ್ಟಿಲ್ಲ. ಆಕೆಯನ್ನು ಬಹುತೇಕ ಮಂದಿ ಶಕ್ತಿದೇವತೆ, ಮನುಕುಲದ ಸಂರಕ್ಷಕಿ ಎಂದು ಪರಿಗಣಿಸಿದರೆ, ಇಡೀ ಸಮಾಜ ದುರ್ಗಾಪೂಜೆ ಆಚರಿಸುವ ನವರಾತ್ರಿಯನ್ನು ಅಸುರ ಎಂಬ ಒಂದು ಬುಡಕಟ್ಟು ಜನಾಂಗ ಶೋಕಾಚರಣೆ ಮಾಡುತ್ತದೆ. ಮಹಿಷಾಸುರನನ್ನು ಹತ್ಯೆ ಮಾಡಿದ್ದನ್ನು ಅವರು ಸಂಭ್ರಮವಾಗಿ ಆಚರಿಸುವುದಿಲ್ಲ. ಅಸುರ ಬುಡಕಟ್ಟಿಗೆ ಸೂಕ್ಷ್ಮ ವಿಷಯ ಎಂಬ ಕಾರಣಕ್ಕಾಗಿ ದುರ್ಗಾಪೂಜೆಯನ್ನು ತಡೆಯುತ್ತೇವೆಯೇ?
ಹೀಗೆಯೇ ರಾವಣನನ್ನು ಪೂಜಿಸುವ ಒಂದು ವರ್ಗಕ್ಕಾಗಿ ಇಡೀ ಸಮಾಜ ದಸರಾ ಆಚರಣೆಯನ್ನು ಇತರರು ನಿಲ್ಲಿಸಬೇಕೇ? ಎಲ್ಲರ ಮನಸ್ಸನ್ನೂ ಗೆಲ್ಲುವುದು ಖಂಡಿತಾ ಅಸಾಧ್ಯ. ಅಸಹಿಷ್ಣುತೆ ಕುರಿತ ಹೇಳಿಕೆಗಾಗಿ ಶಾರುಖ್ ಖಾನ್ ಘೋರ ಪರಿಣಾಮ ಎದುರಿಸಬೇಕಾಯಿತು. ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಅತೃಪ್ತಿ ಹೊರಹಾಕಿದ್ದಕ್ಕಾಗಿ ಆತನನ್ನು ರಾಷ್ಟ್ರದ್ರೋಹಿ; ಪಾಕಿಸ್ತಾನಕ್ಕೆ ಅಟ್ಟಬೇಕು ಎಂಬ ಮಾತುಗಳೂ ಕೇಳಿಬಂದವು. ‘‘ನನ್ನ ಸ್ವಂತ ಮಗಳ ಬಗ್ಗೆ ನಾನು ಮಾತನಾಡಿದರೂ ಕೆಲ ಜನ ಸಿಟ್ಟಾಗುತ್ತಾರೆ’’ ಎಂದು ಖಾನ್ ಹೇಳುತ್ತಾರೆ. ಇತಿಹಾಸವೇ ಮೂಲಭೂತವಾಗಿ ಸತ್ಯದ ಸುವಾರ್ತೆಯಲ್ಲ. ಹಾಗಿದ್ದ ಮೇಲೆ ಚಿತ್ರ ಹಾಗಿರಬೇಕು ಎಂದು ನಿರೀಕ್ಷಿಸುವುದೂ ಸಾಧುವಲ್ಲ. ಇತಿಹಾಸ ಕೂಡಾ ಅದನ್ನು ಬರೆದ ವ್ಯಕ್ತಿಯ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂಬ ವಾಸ್ತವದ ಅರಿವು ನಮಗಿಲ್ಲವೇ?







