ಅಜಿತ್ ಮತ್ತೆ ವಿಭಿನ್ನ ಪಾತ್ರದಲ್ಲಿ

ತಮಿಳು ಚಿತ್ರನಟ ಅಜಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ‘ತಲಾ-57’ ಚಿತ್ರದ ಮೂಲಕ. ಬೇಹುಗಾರಿಕೆಯ ಚಿತ್ರಗಳು ಇತ್ತೀಚೆಗೆ ಜನರನ್ನು ಹೆಚ್ಚು ಹೆಚ್ಚಾಗಿ ಸೆಳೆಯುತ್ತಿದೆ. ವಿಕ್ರಮ್ ಅವರ ‘ಇರುಮುಗಂ’ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿ ವಿಫಲವಾದ ಒಂದು ಚಿತ್ರ. ಇಲ್ಲಿ ವಿಕ್ರಮ್ ದ್ವಿಪಾತ್ರವನ್ನು ಮಾಡಿದ್ದರು. ‘ತಲಾ 57’ ಚಿತ್ರದಲ್ಲಿ ಅಜಿತ್ ಇದೀಗ ಭಾರತೀಯ ಏಜೆಂಟ್ ಪಾತ್ರ ನಿರ್ವಹಿಸಲಿದ್ದಾರೆ.
ಇದು ಮೂರು ಭಾಗವನ್ನು ಹೊಂದಿರುವ ಚಿತ್ರ ಸರಣಿಯಂತೆ. ಚಿತ್ರನಿರ್ಮಾಪಕರು ಈಗಾಗಲೇ ಮೂರೂ ಭಾಗಗಳ ಕಥಾಹಂದರ ಅಂತಿಮಪಡಿಸಿದ್ದಾರೆ ಎನ್ನಲಾಗಿದೆ. ಆಸ್ಟ್ರಿಯಾದ ಕೆರಿಂಥಿಯಾದಲ್ಲಿನ ‘ತಲಾ-57’ನ ಸೆಟ್ ಕಳೆದ ವರ್ಷ ಆನ್‌ಲೈನ್‌ನಲ್ಲಿ ಸೋರಿಕೆಯಾದಾಗ, ಕಾಲಿವುಡ್ ಪ್ರೇಮಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚಾವಿಷಯವಾಯಿತು.
ಚಿತ್ರನಿರ್ಮಾಪಕರು ಆ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದರೂ, ಆನ್‌ಲೈನ್‌ನಲ್ಲಿ ಸೋರಿಕೆಯಾದ ಚಿತ್ರತುಣುಕು ಚಿತ್ರಕ್ಕೆ ಹಾನಿ ಮಾಡುವುದಕ್ಕಿಂತ ಹೆಚ್ಚಾಗಿ ಒಳ್ಳೆಯದನ್ನೇ ಮಾಡಿತು. ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಅಜಿತ್ ಅವರ ಮೈಕಟ್ಟು ರೂಪಾಂತರ. ಕಠಿಣ ಪರಿಶ್ರಮದಿಂದ ಅಜಿತ್ ತಮ್ಮ ಸ್ವರೂಪವನ್ನೇ ಬದಲಿಸಿಕೊಂಡಿದ್ದಾರೆ. ಈ ಅಂತಾರಾಷ್ಟ್ರೀಯ ಬೇಹುಗಾರನ ಪಾತ್ರ ಕ್ಕಾಗಿ ಸಾಕಷ್ಟು ತೂಕ ಕಳೆದುಕೊಂಡಿರುವ ಅಜಿತ್, ಮಾಂಸಖಂಡ ಬೆಳೆಸಿಕೊಂಡಿದ್ದಾರೆ.





