ಡಿ.9ರಂದು ಮಂಗಳೂರಿನಲ್ಲಿ ಭಾರತ ಭಾಗ್ಯ ವಿಧಾತ
ಮಂಗಳೂರು, ಫೆ.4: ಸಂವಿಧಾನ ಶಿಲ್ಪಿಡಾ.ಬಿ.ಆರ್. ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆಯ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ಧ್ವನಿ-ಬೆಳಕು ಕಾರ್ಯಕ್ರಮ ‘ಭಾರತ ಭಾಗ್ಯ ವಿಧಾತ’ ಫೆಬ್ರವರಿ 9ರಂದು ಸಂಜೆ 7 ಗಂಟೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ.
ಭಾರತ ಭಾಗ್ಯ ವಿಧಾತ - ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾ ಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆಯನ್ನು ಧ್ವನಿ ಮತ್ತು ಬೆಳಕಿನ ವೈಭವದಲ್ಲಿ ರೂಪಿಸಲಾಗುತ್ತಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯ ಈ ಕಾರ್ಯಕ್ರಮಕ್ಕೆ ನಿರ್ದೇಶನ ಮತ್ತು ಸಾಹಿತ್ಯವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್, ಸಂಗೀತ ಪೂರ್ಣಚಂದ್ರ ತೇಜಸ್ವಿ, ರಂಗ ವಿನ್ಯಾಸ ಶಶಿಧರ ಅಡಪ, ವಸ್ತ್ರಾಲಂಕಾರ ಪ್ರಮೋದ್ ಶಿಗ್ಗಾವ್ ಹಾಗೂ ಡಾ.ಕೆ.ವೈ. ನಾರಾಯಣಸ್ವಾಮಿ ಅವರು ಗೀತ ರಚನೆ ಮಾಡಿದ್ದಾರೆ. ಕಣ್ತುಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತದೊಂದಿಗೆ ವೈಚಾರಿಕತೆಯ ಹಿನ್ನೋಟ ಅಡಿಬರಹದಲ್ಲಿ ರೂಪುಗೊಂಡಿರುವ ಈ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ.
ಸುಮಾರು 80 ಕಲಾವಿದರು 15 ದಿನಗಳ ಕಾಲ ಬಿ.ಎಂ. ಗಿರಿರಾಜ್ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮ ಕರ್ನಾಟಕದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ನಡೆಯುತ್ತಿದೆ. ಮಂಗಳೂರಿನಲ್ಲಿ ಧ್ವನಿ ಬೆಳಕಿನ ವೈಭವದಲ್ಲಿ ನಡೆಯುತ್ತಿರುವ ಅಪರೂಪದ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿಗಳ ಪ್ರಕಟನೆ ತಿಳಿಸಿದೆ.







