ಉಜಿರೆ ಎಸ್‌ಡಿಎಂ ಕಾಲೇಜು ತಂಡ ಸಮಗ್ರ ಚಾಂಪಿಯನ್
ಮಂಗಳೂರು ವಿ.ವಿ. ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯಾವಳಿ

ಮೂಡುಬಿದಿರೆ, ಫೆ.4: ಧವಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಂಗಳೂರು ವಿವಿ ಮಟ್ಟದ ಅಂತರ್‌ಕಾಲೇಜು ನೆಟ್‌ಬಾಲ್ ಪಂದ್ಯಾಟದಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗಗಳೆರಡರಲ್ಲೂ ಉಜಿರೆಯ ಎಸ್‌ಡಿಎಂ ಕಾಲೇಜು ತಂಡ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಮೂಡುಬಿದಿರೆಯ ಶ್ರೀ ಧವಳಾ ಕಾಲೇಜು, ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ ಕ್ಯಾಂಪಸ್ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರವಾಗಿದೆ. ಎರಡೂ ವಿಭಾಗದಲ್ಲಿ ಕುಂದಾಪುರದ ಡಾ.ಬಿ.ಬಿ ಹೆಗ್ಡೆ ತೃತೀಯ ಸ್ಥಾನವನ್ನು ಗಳಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಬೆಸ್ಟ್ ಶೂಟರ್ ಆಗಿ ಉಜಿರೆ ಎಸ್‌ಡಿಎಂನ ನಿತಿನ್, ಉತ್ತಮ ತಡೆಗಾರನಾಗಿ ಎಸ್‌ಡಿಎಂನ ಅಭಿಲಾಷ್, ಸವ್ಯಸಾಚಿಯಾಗಿ ಮೂಡುಬಿದಿರೆ ಶ್ರೀ ಧವಳಾ ಕಾಲೇಜಿನ ಪ್ರಫುಲ್ ಪ್ರಿಸ್ಟನ್ ಡಿಸೋಜ ಮೂಡಿ ಬಂದಿದ್ದಾರೆ. ಮಹಿಳಾ ವಿಭಾಗದಲ್ಲಿ ಬೆಸ್ಟ್ ಶೂಟರ್ ಆಗಿ ಎಸ್‌ಡಿಎಂನ ಮೇಘಾ, ಉತ್ತಮ ತಡೆಗಾರ್ತಿಯಾಗಿ ಎಸ್‌ಡಿಎಂನ ಮುತ್ತಮ್ಮ ಹಾಗೂ ಸವ್ಯಸಾಚಿಯಾಗಿ ಮಂಗಳೂರು ವಿವಿಯ ನಂದಿನಿ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪ್ರಬಂಧಕ ಗುರುರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಶ್ರೀಧವಲಾ ಕಾಲೇಜಿನ ಪ್ರಾಂಶುಪಾಲ ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಿ.ಜೆ. ವಿವಿ ಸಂಘದ ಸಂಚಾಲಕ ಬಿ.ಪ್ರತಾಪ್ ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸ. ನಿರ್ದೇಶಕ ರಮೇಶ್ ಮುಖ್ಯ ಅತಿಥಿಗಳಾಗಿದ್ದರು. ಸುದರ್ಶನ್ ಸ್ವಾಗತಿಸಿದರು. ಕಾಲೇಜಿನ ದೈ.ಶಿ.ನಿ, ಕೂಟ ಸಂಯೋಜಕ ಶಾಂತಿರಾಜ ಕಾಂಬ್ಳಿ ಕಾರ್ಯಕ್ರಮ ನಿರೂಪಿಸಿದರು.





