ಮಂಗಳೂರಿನಲ್ಲಿ ಬಹುವಿಧದ ಖಾದ್ಯಗಳ ‘ಖಸಾಕ್’ ರೆಸ್ಟೋರೆಂಟ್

ಮಂಗಳೂರು, ಫೆ.4: ನಗರದ ಲಾಲ್‌ಬಾಗ್‌ನಲ್ಲಿರುವ ಕರಾವಳಿ ಉತ್ಸವ ಮೈದಾನದ ಮಾರ್ಟಿನ್ ಪಾಯಸ್ ರಸ್ತೆಗೆ ತಾಗಿಕೊಂಡು ಪ್ರವಾಸಿ ತಾಣಗಳಲ್ಲಿ ಕಂಡು ಬರುವ ರೆಸ್ಟೋರೆಂಟ್‌ಗಳನ್ನು ಹೋಲುವ ‘ಖಸಾಕ್’ ರೆಸ್ಟೋರೆಂಟ್ ಖಾದ್ಯಪ್ರಿಯರನ್ನು ಆಕರ್ಷಿಸುತ್ತಿದೆ.
ಹಳೆ ಶೈಲಿಯ ಹೆಂಚಿನ ಮನೆಗೆ ಆಧುನಿಕ ಶೈಲಿಯನ್ನು ಅಳವಡಿಸಲಾದ ಕೇರಳದ ಉದ್ಯಮಿ ಶಮೀರ್ ಮಾಲಕತ್ವದ ಈ ‘ಖಸಾಕ್’ ರೆಸ್ಟೋರೆಂಟ್ ಪ್ರವಾಸಿ ತಾಣಕ್ಕೆ ಸರಿಸಮಾನವಾಗಿದೆ. ತೆಂಗು ಹಾಗೂ ಇತರ ಬೃಹತ್ ಮರಗಳ ನಡುವೆ ಇರುವ ಈ ಮನೆಯ ಆವರಣದಲ್ಲೇ ಗುಡಿಸಲುಗಳಂತೆ ಹೋಲುವ ಹೆಂಚಿನ ಛಾವಣಿಯುಳ್ಳ 3-4 ವಿಶೇಷ ಕೋಣೆಗಳು ಗಮನ ಸೆಳೆಯುತ್ತಿವೆ. ರಾತ್ರಿಯಂತೂ ಜಗಜಗಿಸುವ ವಿದ್ಯುತ್ ದೀಪಗಳು ಕಣ್ಮನ ಸೆಳೆಯುತ್ತದೆ. ಎಲ್ಲವೂ ಸುಂದರವಾದ ಮರದ ಕೆತ್ತನೆಯಿಂದ ಕೂಡಿರುವ ಕಾರಣ ‘ಮನೆ’ಯಲ್ಲೇ ಕುಳಿತು ‘ಕೈ’ರುಚಿ ನೋಡುವ ಅನುಭವ ಆದಂತಾಗುತ್ತದೆ.
ಹೆಂಚಿನ ಮನೆಯ ಈ ರೆಸ್ಟೋರೆಂಟ್‌ಗೆ ಕಲಾತ್ಮಕ ಸ್ಪರ್ಶ ನೀಡಲಾಗಿದ್ದು, ಒಳಾಂಗಣ ವಿನ್ಯಾಸ ಕೂಡ ಹಳೆಯ ಮನೆಗೆ ಕಾಲಿಟ್ಟಂತ ಅನುಭವ ನೀಡುತ್ತದೆ. ಭೋಜನಕ್ಕೆ ಜೋಡಿಸಿಡಲಾದ ಮೇಜು-ಕುರ್ಚಿಗಳು ಮರದ ಕೆತ್ತನೆಯಿಂದ ಕೂಡಿದೆ. ಪೂರ್ವಾಹ್ನ 11ಕ್ಕೆ ಆರಂಭವಾಗುವ ‘ಖಸಾಕ್’ ರಾತ್ರಿ 11ರವರೆಗೆ ತೆರೆದಿರುತ್ತದೆ. ಇಲ್ಲಿ ಚಿಕನ್, ಮಟನ್ ಹಾಗೂ ಮೀನಿನ ವೈವಿಧ್ಯಮಯ ಖಾದ್ಯಗಳು ಸದಾ ಲಭ್ಯವಿವೆ. ಮಧ್ಯಾಹ್ನ ಮತ್ತು ರಾತ್ರಿಯ ಊಟ, ಬಿರಿಯಾನಿಯಲ್ಲದೆ ಕೇರಳದ ಪುಟ್ಟು, ಪರೋಟ, ತಟ್ಟು ದೋಸೆ, ಅರಿ ದೋಸೆ, ಕಲ್ಲಪ್ಪಂ ಸಹಿತ ಹಲವು ಬಗೆಯ ತಿಂಡಿ-ತಿನಿಸುಗಳೂ ಇಲ್ಲಿವೆ.
‘ಖಸಾಕ್’ನಲ್ಲಿ ಸ್ವಾದಿಷ್ಟಕರ ಚೈನೀಸ್, ಕೇರಳ ಹಾಗೂ ಮಂಗಳೂರು, ಭಾರತೀಯ, ಪಾಶ್ಚಾತ್ಯ ಶೈಲಿಯ ಹಲವು ವಿಧವಾದ ಖಾದ್ಯಗಳಲ್ಲದೆ ಅತ್ಯಾಧುನಿಕ ಮಾದರಿಯ ಶುಚಿ-ರುಚಿಯಾದ ಮಾಂಸಾಹಾರ, ಸಸ್ಯಾಹಾರ, ತಂಪು ಪಾನೀಯ, ಐಸ್‌ಕ್ರೀಂ, ಜ್ಯೂಸ್, ಚಹಾ, ಕಾಫಿ ಸಹಿತ ನೂರಾರು ಬಗೆಯ ತಿಂಡಿ- ತಿನಿಸುಗಳು ಲಭ್ಯವಿವೆ. ಸುಮಾರು 100 ಮಂದಿಗೆ ಏಕಕಾಲಕ್ಕೆ ತಿಂಡಿ-ತಿನಿಸು ತಿನ್ನುವ ಮತ್ತು ಭೋಜನ ಮಾಡುವ ವ್ಯವಸ್ಥೆಯಿದೆ. ಆಹಾರ ತಯಾರಿಸಲು ಮತ್ತು ಕುಡಿಯಲು ಹಾಗೂ ಪಾತ್ರೆಪಗಡೆಗಳನ್ನು ತೊಳೆಯಲು ಶುದ್ಧೀಕರಿಸಲ್ಪಟ್ಟ ನೀರನ್ನೇ ಬಳಸಲಾಗುತ್ತದೆ. ಮಂಗಳೂರು ಆಸುಪಾಸಿನ 4-5 ಕಿ.ಮೀ. ವ್ಯಾಪ್ತಿಯೊಳಗೆ ಡೋರ್ ಡೆಲಿವರಿ ವ್ಯವಸ್ಥೆಯು ಇಲ್ಲಿ ಲಭ್ಯ.







