ಟ್ರಂಪ್ ಗರ್ವಭಂಗ: ಸಾವಿರಾರು ವೀಸಾಗಳ ರದ್ದತಿ ವಾಪಸ್ ಪಡೆದ ಅಮೆರಿಕ

ವಾಷಿಂಗ್ಟನ್, ಫೆ.5: ಕೆಲ ದೇಶಗಳಿಂದ ಅಮೆರಿಕಕ್ಕೆ ಬರುವ ಪ್ರವಾಸಿಗರ ವೀಸಾ ತಡೆಹಿಡಿಯುವಂತೆ ಟ್ರಂಪ್ ಸರ್ಕಾರ ನೀಡಿದ ಆದೇಶಕ್ಕೆ ವಿರುದ್ಧವಾಗಿ ಸಾವಿರಾರು ವೀಸಾಗಳ ರದ್ದತಿ ನಿರ್ಧಾರವನ್ನು ವಾಪಸ್ ಪಡೆದಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಿಸಿದೆ. ಇದರಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೊದಲ ಬಾರಿ ಮುಖಭಂಗವಾಗಿದೆ.
ರಕ್ಷಣಾ ಇಲಾಖೆ ಅಧಿಕಾರಿಗಳ ಪ್ರಕಾರ, ವಾಸ್ತವವಾಗಿ ವೀಸಾ ರದ್ದತಿ ಆಗದ ಮಂದಿ ಪ್ರಯಾಣ ಕೈಗೊಳ್ಳಲು ಅವಕಾಶವಿದೆ. ಏಳು ದೇಶಗಳ ಪ್ರಯಾಣಿಕರನ್ನು ನಿರ್ಬಂಧಿಸಿ ನೀಡಿದ್ದ ಆದೇಶದಿಂದಾಗಿ ತಡೆಹಿಡಿಯಲ್ಪಟ್ಟ ಸುಮಾರು 60 ಸಾವಿರ ಇಂಥ ವೀಸಾಗಳ ರದ್ದತಿಯನ್ನು ವಾಪಸ್ ಪಡೆಯಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಜಿಲ್ಲಾ ಹಿರಿಯ ನ್ಯಾಯಾಧೀಶ ಜೇಮ್ಸ್ ಎಲ್.ರಾಬರ್ಟ್ ಅವರು ಶುಕ್ರವಾರ, ಟ್ರಂಪ್ ಆದೇಶದ ವಿರುದ್ಧ ತಡೆಯಾಜ್ಞೆ ನೀಡಿದ್ದರು. ವಾಷಿಂಗ್ಟನ್ ಸ್ಟೇಟ್ ಅಟಾರ್ನಿ ಜನರಲ್ ಬಾಬ್ ಫರ್ಗ್ಯೂಸನ್ ಅವರ ಕೋರಿಕೆ ಮೇರೆಗೆ ಈ ತಡೆಯಾಜ್ಞೆ ನೀಡಿ, ಇದು ದೇಶಾದ್ಯಂತ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದರು.
ಇರಾಕ್, ಇರಾನ್, ಸಿರಿಯಾ, ಸೂಡಾನ್, ಸೋಮಾಲಿಯಾ ಹಾಗೂ ಯೆಮನ್ ದೇಶದಿಂದ ಆಗಮಿಸುವ ಪ್ರವಾಸಿಗಳ ವೀಸಾವನ್ನು ತಾತ್ಕಾಲಿಕವಾಗಿ ನಿಷೇಧಿಸುವ ಆದೇಶವನ್ನು ಟ್ರಂಪ್ ಜನವರಿ 27ರಂದು ಹೊರಡಿಸಿದ್ದರು.







