ಪೊಲೀಸ್ ವಶದಲ್ಲಿದ್ದ ಯುವಕ ಠಾಣೆಯಲ್ಲೇ ಮೃತ್ಯು: ಲಾಕಪ್ ಡೆತ್ ಆರೋಪ
# ಉದ್ರಿಕ್ತರಿಂದ ಪೊಲೀಸ್ ವಾಹನಗಳಿಗೆ ಬೆಂಕಿ, #ತಲೆಮರೆಸಿಕೊಂಡಿರುವ ಪೊಲೀಸ್ ಸಿಬ್ಬಂದಿ

ಗದಗ, ಫೆ.5: ಮರಳು ಸಾಗಾಟಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದಿದ್ದ ಯುವಕನೊಬ್ಬ ಠಾಣೆಯಲ್ಲೇ ಮೃತಪಟ್ಟ ಘಟನೆ ಇಲ್ಲಿ ಶಿರಹಟ್ಟಿ ಗ್ರಾಮದ ಲಕ್ಷ್ಮೇಶ್ವರ ಹೊಸ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇದೇ ವೇಳೆ ಇದೊಂದು ಲಾಕಪ್ ಡೆತ್ ಎಂದು ಆರೋಪಿಸಿರುವ ಸಾರ್ವಜನಿಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಶಿರಹಟ್ಟಿ ಗ್ರಾಮದ ಬಟ್ಟೂರು ಗ್ರಾಮ ನಿವಾಸಿ ಶಿವಪ್ಪ ಗೂಳಿ(21) ಠಾಣೆಯಲ್ಲಿ ಮೃತಪಟ್ಟ ಯುವಕ. ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಈತನನ್ನು ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದರು ಎಂದು ಹೇಳಲಾಗಿದೆ. ಇದೀಗ ಶಿವಪ್ಪ ಠಾಣೆಯಲ್ಲಿ ಮೃತಪಟ್ಟಿದ್ದು, ಇದೊಂದು ಲಾಕಪ್ ಡೆತ್ ಎಂದು ಆರೋಪಿಸಿರುವ ಸಾರ್ವಜನಿಕರು ಪೊಲೀಸರು ಥಳಿಸಿದ್ದರಿಂದಲೇ ಶಿವಪ್ಪ ಮೃತಪಟ್ಟಿರುವುದಾಗಿ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಿತರು ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಒಂದು ಪೊಲೀಸ್ ಜೀಪ್, 3 ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ.
ಇದೀಗ ಉದ್ರಿಕ್ತರು ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದು, ದಾಖಲೆಪತ್ರಗಳು ಬೆಂಕಿಗೆ ಆಹುತಿಯಾಗಿವೆ.
ಜನಾಕ್ರೋಶಕ್ಕೆ ಹೆದರಿಂದ ಲಕ್ಷ್ಮೇಶ್ವರ ಠಾಣೆಯ ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.
ಲಕ್ಷ್ಮೇಶ್ವರ ಪೊಲೀಸ್ ಠಾಣೆಯೆದುರು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದು, ಠಾಣೆಯ ಪೀಠೋಪಕರಣಗಳು, ಕಿಟಕಿ ಗಾಜುಗಳಿಗೆ ಹಾನಿ ಎಸಗಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.







