ಮೂರು ಲಕ್ಷ ರೂ.ಗಿಂತ ಹೆಚ್ಚಿನ ನಗದು ಹಣ ಸ್ವೀಕರಿಸಿದರೆ ಅಷ್ಟೇ ಮೊತ್ತದ ದಂಡ:ಆಧಿಯಾ

ಹೊಸದಿಲ್ಲಿ,ಫೆ.5: ಕಪ್ಪುಹಣ ಸೃಷ್ಟಿಯಾಗುವುದನ್ನು ತಡೆಯಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವ ಕೇಂದ್ರವು ಎ.1ರಿಂದ ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ. ಯಾವುದೇ ವಹಿವಾಟಿಗೆ ಸಂಬಂಧಿಸಿದಂತೆ ಮೂರು ಲ.ರೂ.ಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸಿದವರಿಗೆ ಅಷ್ಟೇ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.
ಮೂರು ಲಕ್ಷ ರೂ.ಗಿಂತ ಹೆಚ್ಚಿನ ನಗದು ಪಾವತಿಯ ನಿಷೇಧವನ್ನು 2017-18ನೇ ಸಾಲಿನ ಮುಂಗಡಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಈ ವಿಷಯವನ್ನು ತಿಳಿಸಿದರು.
ವ್ಯಕ್ತಿಯೋರ್ವ ಮೂರು ಲ.ರೂ.ಗೂ ಅಧಿಕ ವೌಲ್ಯದ ವಾಚನ್ನು ಖರೀದಿಸಿದ ಎಂದಿಟ್ಟುಕೊಳ್ಳಿ. ಅಂಗಡಿಯಾತ ಆ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸಿದರೆ ಆತ ಅಷ್ಟೇ ದಂಡವನ್ನು ಪಾವತಿಸಬೇಕಾಗುತ್ತದೆ. ಜನರು ದೊಡ್ಡ ಮೊತ್ತದ ನಗದು ವಹಿವಾಟು ನಡೆಸದಂತಿರಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ನೋಟು ಅಮಾನ್ಯ ಕ್ರಮದಿಂದ ಹೆಚ್ಚಿನ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಭವಿಷ್ಯದಲ್ಲಿ ಕಪ್ಪುಹಣ ಸೃಷ್ಟಿಯಾಗುವುದನ್ನು ನಿಲ್ಲಿಸಲು ಸರಕಾರವೀಗ ಮುಂದಾಗಿದೆ.
ದೊಡ್ಡ ಪ್ರಮಾಣದ ಎಲ್ಲ ನಗದು ವಹಿವಾಟುಗಳ ಮೆಲೆ ಸರಕಾರವು ಕಣ್ಣಿರಿಸಲಿದೆ ಎಂದು ಆಧಿಯಾ ತಿಳಿಸಿದರು.
ಭಾರೀ ಪ್ರಮಾಣದಲ್ಲಿ ಕಪ್ಪುಹಣ ಹೊಂದಿರುವವರು ಸಾಮಾನ್ಯವಾಗಿ ಅದನ್ನು ರಜಾದಿನಗಳ ಮೋಜಿಗಾಗಿ ಅಥವಾ ಕಾರು,ವಾಚ್,ಚಿನ್ನಾಭರಣದಂತಹ ಐಷಾರಾಮಿ ವಸ್ತುಗಳ ಖರೀದಿಗಾಗಿ ಬಳಸುತ್ತಾರೆ. ಹೊಸ ನಿಯಮವು ಇಂತಹ ವೆಚ್ಚದ ಮಾರ್ಗಗಳನ್ನು ಮುಚ್ಚಲಿದೆ ಮತ್ತು ಕಪ್ಪುಹಣ ಸೃಷ್ಟಿಯನ್ನು ನಿರುತ್ತೇಜಿಸುತ್ತದೆ ಎನ್ನುವುದು ಸರಕಾರದ ಲೆಕ್ಕಾಚಾರವಾಗಿದೆ.
ಎರಡು ಲಕ್ಷ ರೂ.ಗೂ ಅಧಿಕ ನಗದು ವಹಿವಾಟಿಗೆ ಪಾನ್ ಸಂಖ್ಯೆಯನ್ನು ನೀಡಬೇಕು ಎಂಬ ನಿಯಮ ಮುಂದುವರಿಯಲಿದೆ ಎಂದು ಆಧಿಯಾ ತಿಳಿಸಿದರು.







