ಡಿಕೆಶಿ ಕ್ಷಮೆಯಾಚನೆಗೆ ಆಗ್ರಹಿಸಿ ಕುಂಬಾರರ ಧರಣಿ

ಉಡುಪಿ, ಫೆ.5: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುಂಬಾರ ಸಮು ದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಕರಾವಳಿ ವಿಭಾಗ ರವಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.
ಮಹಾಸಂಘದ ಕಾರ್ಯಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮಾತನಾಡಿ, ರಾಜ್ಯದಲ್ಲಿ 20ಲಕ್ಷ ಜನಸಂಖ್ಯೆ ಇರುವ ಕುಂಬಾರ ಸಮುದಾಯದ ಬಗ್ಗೆ ರಾಜಕಾರಣಿಗಳಿಗೆ ಅಸಡ್ಡೆ. ಈ ರೀತಿ ತುಚ್ಛವಾಗಿ ಮಾತನಾಡುವುದನ್ನು ನಿಲ್ಲಿಸ ಬೇಕು. ಡಿ.ಕೆ.ಶಿವಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೋಷಿತ ಸಮುದಾಯ ಆಗಿರುವ ಕುಂಬಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಕುಂಬಾರ ಕಲಾ ನಿಗಮವನ್ನು ಪ್ರತ್ಯೇಕವಾಗಿಸಿ ಕುಂಬಾರ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಮತ್ತು ಅಗತ್ಯ ಅನುದಾನ ಒದಗಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಚಿವರು ಕುಂಬಾರ ಸಮುದಾಯದ ಋಣ ತೀರಿಸಲಿ ಎಂದು ಅವರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಾಜಿ ತಾಪಂ ಉಪಾಧ್ಯಕ್ಷ ರಾಮ ಕುಲಾಲ್ ಪಟ್ಲ, ವೇದಿಕೆಯ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಮುಖಂಡರಾದ ಸತೀಶ್ ಕುಲಾಲ್ ಕಡಿಯಾಳಿ, ಐತು ಕುಲಾಲ್, ಸಂತೋಷ್ ಕುಲಾಲ್, ಶಂಕರ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.







