92ನೇ ವರ್ಷದಲ್ಲಿ ಅಪ್ಪನಾದ ಫೆಲಿಸ್ತೀನಿನ ವ್ಯಕ್ತಿ !

ಗಾಜಾ,ಫೆ.5: ಪಶ್ಚಿಮ ದಂಡೆಯ ಅಲ್-ಖಲೀಲ್ ನಗರದ ನಿವಾಸಿ, 92ರ ವಯೋವೃದ್ಧ ಮುಹಮ್ಮದ್ ಅಲ್-ಆದಮ್ ಸಂತೋಷದಿಂದ ಬೀಗುತ್ತಿದ್ದಾರೆ, ತನ್ನ ಬಗ್ಗೆ ತಾನೇ ಹೆಮ್ಮೆ ಪಡುತ್ತಿದ್ದಾರೆ. ಅವರ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿರುವುದು ಇದಕ್ಕೆ ಕಾರಣ.
ಮಗಳಿಗೆ ತಮಾರಾ ಎಂದು ನಾಮಕರಣ ಮಾಡಿರುವ ಮುಹಮ್ಮದ್, ಇವಳು ತನಗೆ ದೇವರು ನೀಡಿರುವ ಉಡುಗೊರೆ, ತನಗೆ ತುಂಬ ಸಂತೋಷವಾಗಿದೆ ಎಂದು ಹೇಳಿದರು.
ಇದರೊಂದಿಗೆ ಮುಹಮ್ಮದ್ ಒಟ್ಟು ಎಂಟು ಪುತ್ರಿಯರು ಮತ್ತು ಐವರು ಪುತ್ರರ ಅಪ್ಪನಾಗಿದ್ದಾರೆ. ಈ ವಯಸ್ಸಿನಲ್ಲಿ ಮಗುವಾಗುತ್ತಿರುವುದು ನನಗೇ ಅಚ್ಚರಿ ಹುಟ್ಟಿಸಿತ್ತು, ನನ್ನ ಮಗಳು ದೇವರ ವರದಾನ ಎಂದು ಅವರು ಹೇಳಿದರು.
ತಮಾರಾಳ ತಾಯಿ ಅಬೀರ್‌ಗೆ 42 ವರ್ಷ. ಆಕೆ ಮೂಕಿ ಮಾತ್ರವಲ್ಲ...ಕಿವುಡಿಯೂ ಹೌದು. ಕೆಲವು ವರ್ಷಗಳ ಹಿಂದೆ ಮುಹಮ್ಮದ್‌ರ ಮೊದಲ ಪತ್ನಿ ತೀರಿಕೊಂಡ ಬಳಿಕ ಆಕೆಯನ್ನು ಎರಡನೇ ವಿವಾಹವಾಗಿದ್ದರು.
ತಾನು ತಾಯಿಯಾಗಿರುವುದು ಅಬೀರ್‌ಗೆ ಸಂಭ್ರಮವನ್ನು ತಂದಿದೆ. ಅಷ್ಟೊಂದು ವಯಸ್ಸಾಗಿರುವ ಗಂಡನಿಂದ ಮಗುವನ್ನು ಪಡೆಯುವ ಸಣ್ಣ ನಿರೀಕ್ಷೆಯೂ ತನಗಿರಲಿಲ್ಲ ಎನ್ನುತ್ತಾಳೆ ಆಕೆ.
ವಯಸ್ಸಾದಂತೆ ಮಕ್ಕಳನ್ನು ಹುಟ್ಟಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎನ್ನುವುದನ್ನು ಫಲವತ್ತತೆ ತಜ್ಞ ವೈದ್ಯರು ಒಪ್ಪಿಕೊಳ್ಳುತ್ತಾರೆ. ಅಲ್ಲದೆ ಮಧುಮೇಹ,ರಕ್ತದೊತ್ತಡ ಇತ್ಯಾದಿ ಕಾಯಿಲೆಗಳೂ ಮನುಷ್ಯನ ಫಲವತ್ತತೆಯನ್ನು ಕುಂದಿಸುತ್ತವೆ.ಉತ್ತಮ ಆರೋಗ್ಯವನ್ನು ಹೊಂದಿರುವ ಮತ್ತು ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುವ ವ್ಯಕ್ತಿ ತನ್ನ ಜೀವನವಿಡೀ ಫಲವತ್ತತೆಯನ್ನು ಕಾಯ್ದುಕೊಳ್ಳಬಲ್ಲ ಎನ್ನುತ್ತಾರೆ ವೈದ್ಯರು.
ಇದು ತನ್ನ ವಿಷಯದಲ್ಲಿ ಸತ್ಯ ಎಂದು ಹೇಳಿದ ಮುಹಮ್ಮದ್, ತಾನು ನೈಸರ್ಗಿಕ ಆಹಾರವನ್ನೇ ಸೇವಿಸುತ್ತೇನೆ ಮತ್ತು ಇಡೀ ದಿನ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತೇನೆ ಎಂದು ತಿಳಿಸಿದರು.







