‘ತುಳು ತುಲಿಪು’ ಕೃತಿ ಬಿಡುಗಡೆ

ಮಂಗಳೂರು, ಫೆ.5: ತುಳುಕೂಟ ಕುಡ್ಲದ ವತಿಯಿಂದ ‘ಬೂಕು ತುಪ್ಪೆ’ (ಪುಸ್ತಕ ಭಂಡಾರ)ಯ ಉದ್ಘಾಟನೆ ಹಾಗೂ ತುಳು ತುಲಿಪು ಪುಸ್ತಕ ಬಿಡುಗಡೆ ಕಾರ್ಯಕ್ರಮ ರವಿವಾರ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಪುಸ್ತಕ ಭಂಡಾರ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶರವು ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸಿ ಶರವು ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡಿದರೆ ಮಾತ್ರ ಲ ಸಿಗಬಹುದು. ಹೀಗಾಗಿ ಭಾಷೆಯ ಬೆಳವಣಿಗೆಗೆ ಪ್ರತಿ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಮಂಗಳೂರು ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಶಿವರಾಮ್ ಶೆಟ್ಟಿ ‘ತುಳು ತುಲಿಪು’ ಕೃತಿ ಬಿಡುಗಡೆಗೊಳಿಸಿದರು. ಶ್ರೀ ರಾಮಕೃಷ್ಣ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ಪುಸ್ತಕ ಪರಿಚಯ ಮಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾಸ್ಕರ್ ಕುಲಾಲ್ ಬರ್ಕೆ ಅವರನ್ನು ಸನ್ಮಾನಿಸಲಾಯಿತು. ತುಳು ಕೂಟದ ಅಧ್ಯಕ್ಷ ಬಿ.ದಾಮೋದರ ನಿಸರ್ಗ ಪ್ರಾಸ್ತಾವಿಸಿದರು. ಸದಸ್ಯ ಸಂಜೀವ ಅಡ್ಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ವಿ.ಜಿ.ಪಾಲ್ ಕಾರ್ಯಕ್ರಮ ನಿರೂಪಿಸಿದರು.
ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ತುಳುಕೂಟದ ವತಿಯಿಂದ ಹಂಪನಕಟ್ಟೆಯ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 2014ರಲ್ಲಿ ನಡೆದ ‘ಸಂವಿಧಾನದ 8ನೆ ಪರಿಚ್ಚೇದಗ್ ತುಳು: ತುಳು? ತುಲಿಪು’ ಕೂಟದಲ್ಲಿ ಭಾಷಾ ಪಂಡಿತರು, ಶಿಕ್ಷಣ ತಜ್ಞರು, ಸಾಹಿತಿಗಳು, ನ್ಯಾಯವಾದಿಗಳು ಮಂಡಿಸಿದ ವಿಚಾರಗಳನ್ನು ‘ತುಳು ತುಲಿಪು’ ಕೃತಿಯಲ್ಲಿ ಅಳವಡಿಸಲಾಗಿದೆ.







