ಬಡ ಶಾಲೆಗಳಿಗೆ ಹಳೆ ವಿದ್ಯಾರ್ಥಿಗಳ ನೆರವು ಅಗತ್ಯ : ಅಭಯಚಂದ್ರ
ಬಾಬು ರಾಜೇಂದ್ರ ಪ್ರೌಢಶಾಲೆಯ ಸುವರ್ಣ ಮಹೋತ್ಸವ - ಸಭೆ

ಮೂಡುಬಿದಿರೆ,ಫೆ.5 : ವಿದ್ಯೆ ಕಲಿಯುವ ಶಾಲೆ ದೇವಾಲಯದಂತೆ. ದೇವಸ್ಥಾನಗಳ ಅಭಿವೃದ್ಧಿಗಾಗಿ ನಾವು ಧನ ವಿನಿಯೋಗ ಮಾಡಿದಂತೆಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಆಯಾ ಶಾಲೆಗಳಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳು ಆರ್ಥಿಕ ಸಹಕಾರ ನೀಡಿದಲ್ಲಿ ಶಾಲೆಯನ್ನು ಅಭಿವೃದ್ಧಿಗೊಳಿಸಲು ಸಾದ್ಯವಾಗುತ್ತದೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಜ್ಯೋತಿನಗರದಲ್ಲಿರುವ ಬಾಬು ರಾಜೇಂದ್ರ ಪ್ರೌಢಶಾಲೆಯ ಸುವರ್ಣ ಮಹೋತ್ಸವದಂಗವಾಗಿ ಭಾನುವಾರ ಶಾಲೆಯ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಣಗಳಿಕೆಯ ಲಾಭ ಮಾಡುತ್ತಿರುವ ಶಾಲೆಗಳಿಗೆ ಯಾವುದೇ ಆತಂಕವಿಲ್ಲ. ಬಡ ವಿದ್ಯಾರ್ಥಿಗಳು ಕಲಿಯುವ ಸರಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿ ಪಡಿಸಲು ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಈ ಶಾಲೆಯದುರಸ್ಥಿ ಕಾಣದಿರುವಕಟ್ಟಡಗಳ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇನೆ ಎಂದರು.
ಸುವರ್ಣ ಮಹೋತ್ಸವಕ್ಕೆ ಮತ್ತು ಕಟ್ಟಡ ದುರಸ್ಥಿಗಾಗಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ"ಸೋಜಾ ಮತ್ತು ಸಾಂಸದ ಆಸ್ಕರ್ ಫೆರ್ನಾಂಡಿಸ್ ಅವರ ನಿಧಿಯಿಂದ ತಲಾ ರೂ ಐದು ಲಕ್ಷವನ್ನು ದೊರಕಿಸಿ ಕೊಡುವುದಾಗಿ ಶಾಸಕ ಕೆ. ಅಭಯಂದ್ರ ಜೈನ್ ಭರವಸೆ ನೀಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಮನಾಥ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ,ಶಾಲೆಯ ಸ್ಥಾಪನೆಗೆ ಎಂ.ಕೆ. ದೇವರಾಜ್ ಅವರ ಕೊಡುಗೆ ಅಪಾರ. ಇದೀಗ ಕಟ್ಟಡ ದುರಸ್ಥಿಯ ಅನಿವಾರ್ಯತೆ ಒದಗಿ ಬಂದಿದೆ. ಹಳೆ ವಿದ್ಯಾರ್ಥಿ ಸಂಘವನ್ನು 2006ರಲ್ಲಿ ಸ್ಥಾಪಿಸಲಾಗಿದ್ದು, ಹಳೆ ವಿದ್ಯಾರ್ಥಿಗಳ ಸಹಕಾರ ಅಭಿವೃದ್ಧಿಗೆ ಅಗತ್ಯವಿದೆ ಎಂದರು.
ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಮೂಡ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಮಹಾವೀರ ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಉದ್ಯಮಿ ರವೀಂದ್ರ ಪೈ, ಮಹಾವೀರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿ.ಹೆಚ್ ಗಫೂರ್, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ನಾರಾಯಣ.ಪಿ ಮತ್ತು ಬಾಹುಬಲಿ ಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಪದ್ಮಜಾ ಸ್ವಾಗತಿಸಿದರು. ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಿರಣ್ ವಂದಿಸಿದರು.







