ಲಾಭವನ್ನು ಮಾತ್ರ ಪರಿಗಣಿಸದೆ ಸೇವಾ ಮನೋಭಾವ ಬೆಳೆಸಿಕೊಳ್ಳಿ : ಸಚಿವ ರೈ
ವಿಭಾಗ ಮಟ್ಟದ ಸಾರಿಗೆ ಅದಾಲತ್

ಪುತ್ತೂರು,ಫೆ.5: ಸರ್ಕಾರಿ ಬಸ್ಸುಗಳ ಗ್ರಾಮೀಣ ಪ್ರದೇಶಗಳ ಒಡಾಟ ಸಂದರ್ಭದಲ್ಲಿ ಕೇವಲ ಲಾಭವನ್ನು ಮಾತ್ರ ಪರಿಗಣಿಸದೆ ಸೇವಾ ಮನೋಭಾವದಿಂದ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಪುತ್ತೂರು ಕೆಎಸ್‌ಆರ್‌ಟಿಸಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ಜನಪ್ರತಿನಿಧಿಗಳೊಂದಿಗೆ ನಡೆದ ಪುತ್ತೂರು ವಿಭಾಗ ಮಟ್ಟದ ಸಾರಿಗೆ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲ ಉದ್ದೇಶವೇ ಪ್ರಯಾಣಿಕರ ಸೇವೆ. ಲಾಭ ಎಂಬುದು ನಂತರದ ಉದ್ದೇಶ. ಒಂದು ಕಾಲದಲ್ಲಿ ಜನ ಖಾಸಗಿ ಬಸ್‌ಗಳಿಗೆ ಮೊದಲ ಆದ್ಯತೆ ನೀಡಿ, ನಂತರ ಸರಕಾರಿ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಖಾಸಗಿ ಸಾರಿಗೆಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಕೆಎಸ್‌ಆರ್‌ಟಿಸಿ ಬೆಳೆದು ನಿಂತಿದ್ದು, ರಾಷ್ಟ್ರಮಟ್ಟದಲ್ಲಿ ಹಲವಾರು ಪಾರಿತೋಷಕಗಳನ್ನು ಬಾಚಿಕೊಂಡಿದೆ. ಇದು ಹೆಮ್ಮೆಯ ವಿಚಾರ. ಅಲ್ಲದೇ ನನ್ನ ಅವಧಿಯಲ್ಲೇ ಪುತ್ತೂರು, ಸುಳ್ಯ, ಬೆಳ್ತಂಗಡಿ, ಸುಬ್ರಹ್ಮಣ್ಯ ಡಿಪೋ ನಿರ್ಮಾಣ ಆಗಿರುವುದು ಸಂತೋಷ ತಂದಿದೆ ಎಂದರು.
ಮಂಗಳೂರು ವಿಭಾಗಕ್ಕಿಂತಲೂ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಹೆಚ್ಚಿನ ಮಹತ್ವವಿದೆ. ಕಾರಣ, ಸರಕಾರಿ ಬಸ್‌ಗಳ ಏಕಸ್ವಾಮ್ಯ ಇರುವ ಪ್ರದೇಶ ಪುತ್ತೂರು ವಿಭಾಗದಲ್ಲಿದೆ. ಬಸ್ ಪಾಸ್ ವಿತರಣೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪುತ್ತೂರಿಗಿದೆ. ಹೊಸ ಬಸ್‌ಗಳನ್ನು ಹಳ್ಳಿಗಳಿಗೆ ನೀಡಿ ಸಂತೋಷ ಪಟ್ಟುಕೊಂಡಿದ್ದೇವೆ. ಆದರೆ ಕೆಲವೇ ಸಮಯದಲ್ಲಿ ಅಧಿಕಾರಿಗಳು ಸದ್ದಿಲ್ಲದೆ ಗ್ರಾಮೀಣ ಪ್ರದೇಶಕ್ಕೆ ಓಡಾಡುವ ಬಸ್‌ಗಳನ್ನು ನಿಲ್ಲಿಸಿ ಬಿಡುತ್ತಾರೆ. ಆಗ ಜನಪ್ರತಿನಿಧಿಗಳಾದ ನಮಗೆ ಮುಜುಗರ ಉಂಟಾಗುತ್ತದೆ. ಕಾರಣ ಕೇಳಿದರೆ ನಷ್ಟ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತದೆ. ಪ್ರಯಾಣಿಕರ ಸೇವೆಯ ವಿಚಾರ ಬಂದಾಗ ಲಾಭವನ್ನು ಎರಡನೇ ವಿಚಾರವಾಗಿ ಪರಿಗಣಿಸಬೇಕು ಎಂದು ಕಿವಿ ಮಾತು ಹೇಳಿದರು.
ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಅಂತಾರಾಜ್ಯ ರಸ್ತೆಗಳಲ್ಲಿ ಈಗಲೂ ಹೊಸ ಬಸ್‌ಗಳಿಗೆ ಬೇಡಿಕೆ ಇದೆ. ಪುತ್ತೂರಿನಿಂದ ಪಾಣಾಜೆ ಮೂಲಕ ಕಾಸರಗೋಡಿಗೆ ಮತ್ತು ಸುಳ್ಯಪದವು ಮೂಲಕ ಕಾಸರಗೋಡಿಗೆ ಹೋಗುವ ಅಂತಾರಾಜ್ಯ ಬಸ್‌ಗಳನ್ನು ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವರ್ಷ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟನೆಗೆ ಬಂದಿದ್ದಾಗ 160 ಬಸ್‌ಗಳಿಗೆ ಬೇಡಿಕೆ ಇಟ್ಟಿದ್ದೆ. ಅದರಲ್ಲಿ 43 ಬಸ್‌ಗಳು ಬಂದಿವೆ. ಉಳಿದ ಬಸ್‌ಗಳೂ ಬರುವ ನಿರೀಕ್ಷೆ ಇದೆ. ಅಗತ್ಯವಿದ್ದರೆ ಹೆಚ್ಚುವರಿ ಬಸ್ ನೀಡಲಾಗುವುದು ಎಂದು ಎಂಡಿ ಭರವಸೆ ನೀಡಿದ್ದಾರೆ ಎಂದು ಶಾಸಕರು ಹೇಳಿದರು.
ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯ ಅಧಿಕಾರಿಯೇತರ ನಿರ್ದೇಶಕ ಟಿ.ಕೆ. ಸುಧೀರ್ ಉಪಸ್ಥಿತರಿದ್ದರು. ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ ಸ್ವಾಗತಿಸಿದರು. ಅಧಿಕಾರಿ ರಮೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿಸೋಜ ಸಹಕರಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಜಿಪಂ, ತಾಪಂ ಮತ್ತು ಗ್ರಾಪಂ ಸದಸ್ಯರು ಸಾರಿಗೆ ಸಮಸ್ಯೆಗಳಿಗೆ ಸಂಬಂಧಿಸಿ ತಮ್ಮ ಪ್ರಶ್ನೆ ಮತ್ತು ಅಹವಾಲುಗಳನ್ನು ಸಲ್ಲಿಸಿದರು. ಅಧಿಕಾರಿಗಳು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಉತ್ತರ ನೀಡಿದರು. ಜಿಪಂ ಸದಸ್ಯರಾದ ಎಂ.ಎಸ್. ಮಹಮ್ಮದ್, ಶೇಖರ್ ಕುಕ್ಕೇಡಿ, ಆಶಾ ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.







