ಬಹ್ರೈನ್‌ನಲ್ಲಿ ‘ಭಯೋತ್ಪಾದಕ’ ಬಾಂಬ್ ಸ್ಫೋಟ
ದುಬೈ, ಫೆ. 5: ಬಹ್ರೈನ್ ರಾಜಧಾನಿ ಮನಾಮದ ಹೊರವಲಯದಲ್ಲಿ ರವಿವಾರ ಬಾಂಬೊಂದು ಸ್ಫೋಟಗೊಂಡಿದ್ದು, ಹಲವಾರು ಕಾರುಗಳು ಹಾನಿಗೀಡಾಗಿವೆ. ಆದರೆ, ಯಾರೂ ಗಾಯಗೊಂಡಿಲ್ಲ.ಬಾಂಬ್ ಸ್ಫೋಟವು ಭಯೋತ್ಪಾದಕ ಕೃತ್ಯವಾಗಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
2014ರಲ್ಲಿ ನಡೆದ ಬಾಂಬ್ ದಾಳಿಯೊಂದಕ್ಕೆ ಸಂಬಂಧಿಸಿ ಮೂವರನ್ನು ಕಳೆದ ತಿಂಗಳು ಗಲ್ಲಿಗೇರಿಸಲಾಗಿತ್ತು. ಬಾಂಬ್ ಸ್ಫೋಟದಲ್ಲಿ ಮೂವರು ಪೊಲೀಸರು ಸಾವಿಗೀಡಾಗಿದ್ದರು.ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ದೇಶದಲ್ಲಿ ದಿನೇ ದಿನೇ ಪ್ರತಿಭಟನೆಗಳು ನಡೆಯುತ್ತಿವೆ.
ಬಹ್ರೈನ್‌ನಲ್ಲಿ 2011ರಲ್ಲಿ ನಡೆದ ‘ಅರಬ್ ಬಂಡಾಯ’ದ ಬಳಿಕ, ಅಲ್ಲಿ ಅಶಾಂತಿ ನೆಲೆಸಿದ್ದು, ಹಲವಾರು ಬಾಂಬ್ ಸ್ಫೋಟಗಳು ಸಂಭವಿಸಿವೆ.
ಕಳೆದ ತಿಂಗಳು ರಾಜಧಾನಿಯ ಹೊರಗಡೆ ಕರ್ತವ್ಯದಲ್ಲಿರದ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಇದು ರಾಜಕೀಯ-ಪ್ರೇರಿತ ದಾಳಿ ಎಂಬುದಾಗಿ ಸರಕಾರ ಹೇಳಿತ್ತು.
Next Story





