ಅಮೆರಿಕಕ್ಕೆ ಧಾವಿಸುತ್ತಿರುವ ವಿದೇಶೀಯರು :ಸಾವಿರಾರು ಮಂದಿಯಿಂದ ವಿಮಾನ ಟಿಕೆಟ್‌ಗಳ ಖರೀದಿ

ಬಾಸ್ಟನ್, ಫೆ. 5: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶದಿಂದ ಅಮೆರಿಕಕ್ಕೆ ಮರಳಲು ಸಾಧ್ಯವಾಗದೆ ಹತಾಶರಾಗಿದ್ದ ವಲಸಿಗರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಟ್ರಂಪ್ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರೊಬ್ಬರು ಶುಕ್ರವಾರ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ, ಅದರ ಸಂಪೂರ್ಣ ಪ್ರಯೋಜವನ್ನು ಪಡೆಯಲು ವಲಸಿಗರು ಮುಂದಾಗಿದ್ದಾರೆ.
ಇರಾನ್‌ನಿಂದ 40ಕ್ಕೂ ಅಧಿಕ ಮಂದಿ ಶನಿವಾರ ಮಧ್ಯಾಹ್ನ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸಿದ ಒಂದು ವಾರದ ಬಳಿಕ, ಅಮೆರಿಕ ಪ್ರವೇಶಿಸಿದ ನಿಷೇಧಿತ ದೇಶಗಳ ಮೊದಲ ನಿವಾಸಿಗಳು ಅವರಾಗಿದ್ದಾರೆ.
ಅದೇ ವೇಳೆ, ತಡೆಯಾಜ್ಞೆ ಹೆಚ್ಚು ಸಮಯ ಜಾರಿಯಲ್ಲಿರುವುದು ಎನ್ನುವ ಭರವಸೆ ಇಲ್ಲದ ಕಾರಣ ಅಮೆರಿಕಕ್ಕೆ ಧಾವಿಸಲು ವಿದೇಶೀಯರು ಮುಂದಾಗಿದ್ದಾರೆ. ಅಮೆರಿಕಕ್ಕೆ ಹೋಗುವ ವಿಮಾನಗಳನ್ನು ಹಿಡಿಯಲು ಸಾವಿರಾರು ಮಂದಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ.
ನಿಷೇಧ ಜಾರಿಗೆ ಬಂದ ಸಂದರ್ಭದಲ್ಲಿ ಅಮೆರಿಕ ಪ್ರವೇಶದಿಂದ ವಂಚಿತರಾಗಿದ್ದವರು ಶನಿವಾರ ಅಪರಾಹ್ನ ಲೋಗನ್ ತಲುಪಿದರು. ರವಿವಾರ ಹೆಚ್ಚಿನ ಸಂಖ್ಯೆಯ ಜನರು ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.







