ನಿಷೇಧ ಆದೇಶದ ತಡೆಯಾಜ್ಞೆಯ ತಕ್ಷಣದ ತೆರವಿಗೆ ಮೇಲ್ಮನವಿ ನ್ಯಾಯಾಲಯ ನಕಾರ

ಲಾಸ್ ಏಂಜಲಿಸ್, ಫೆ. 5: ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ವಲಸೆ ನಿಷೇಧ ಆದೇಶವನ್ನು ತಕ್ಷಣ ಮರುಜಾರಿಗೆ ತರುವಂತೆ ಕಾನೂನು ಸಚಿವಾಲಯ ಮಾಡಿರುವ ಮನವಿಯನ್ನು ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯವೊಂದು ರವಿವಾರ ಬೆಳಗ್ಗೆ ತಿರಸ್ಕರಿಸಿದೆ.
ಮುಸ್ಲಿಮ್ ಬಾಹುಳ್ಯದ ಏಳು ದೇಶಗಳ ನಿವಾಸಿಗಳು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಟ್ರಂಪ್ ಆದೇಶಕ್ಕೆ ಕೆಳ ಫೆಡರಲ್ ನ್ಯಾಯಾಲಯವೊಂದು ಇತ್ತೀಚೆಗೆ ತಡೆಯಾಜ್ಞೆ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಟ್ರಂಪ್ ಆಡಳಿತವು ಒಂಬತ್ತನೆ ಮೇಲ್ಮನವಿ ಸರ್ಕೀಟ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಸದ್ಯಕ್ಕೆ ಪ್ರಯಾಣ ನಿಷೇಧಕ್ಕೆ ನೀಡಿರುವ ತಡೆಯಾಜ್ಞೆ ಚಾಲ್ತಿಯಲ್ಲಿರುತ್ತದೆ.
ತಡೆಯಾಜ್ಞೆಯನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂಬ ತಮ್ಮ ಆದೇಶಕ್ಕೆ ಫೀನಿಕ್ಸ್‌ನ ನ್ಯಾಯಾಧೀಶ ವಿಲಿಯಮ್ ಕ್ಯಾನ್ಬಿ ಜೂನಿಯರ್ ಮತ್ತು ಸಾನ್‌ಫ್ರಾನ್ಸಿಸ್ಕೊದ ನ್ಯಾಯಾಧೀಶೆ ಮಿಶೆಲ್ ಫ್ರೀಡ್‌ಲ್ಯಾಂಡ್ ಯಾವುದೇ ಕಾರಣ ನೀಡಿಲ್ಲ.
ಆದಾಗ್ಯೂ, ಸರಕಾರದ ಮೇಲ್ಮನವಿಗೆ ತಮ್ಮ ವಿರೋಧವನ್ನು ಸೂಚಿಸುವ ದಾಖಲೆಗಳನ್ನು ರವಿವಾರ ರಾತ್ರಿ 11.59ರ ಒಳಗೆ ಸಲ್ಲಿಸುವಂತೆ ನ್ಯಾಯಾಧೀಶರು ವಾಶಿಂಗ್ಟನ್ ಮತ್ತು ಮಿನಸೋಟ ರಾಜ್ಯಗಳಿಗೆ ಸೂಚಿಸಿದ್ದಾರೆ. ಈ ರಾಜ್ಯಗಳು ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶವನ್ನು ಪ್ರಶ್ನಿಸಿ ಮೊದಲಿಗೆ ಮೊಕದ್ದಮೆ ಹೂಡಿದ್ದವು.
ಅದೇ ವೇಳೆ, ತನ್ನ ನಿಲುವನ್ನು ಸಮರ್ಥಿಸುವ ಹೆಚ್ಚುವರಿ ದಾಖಲೆಗಳನ್ನು ರವಿವಾರ ಅಪರಾಹ್ನ 3 ಗಂಟೆಯ ಒಳಗೆ ಸಲ್ಲಿಸುವಂತೆ ನ್ಯಾಯಾಧೀಶರು ಕಾನೂನು ಇಲಾಖೆಗೆ ಸೂಚನೆ ನೀಡಿದ್ದಾರೆ.
ಇರಾನ್, ಇರಾಕ್, ಯಮನ್, ಸುಡಾನ್, ಸಿರಿಯ, ಲಿಬಿಯ ಮತ್ತು ಸೊಮಾಲಿಯ ದೇಶಗಳ ನಾಗರಿಕರಿಗೆ 90 ದಿನಗಳ ಕಾಲ ಅಮೆರಿಕ ಪ್ರವೇಶವನ್ನು ನಿಷೇಧಿಸಿ ಟ್ರಂಪ್ ಕಳೆದ ವಾರ ಸರಕಾರಿ ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದಾಗಿದೆ.
ತಡೆಯಾಜ್ಞೆಯಿಂದ ಸಾರ್ವಜನಿಕರ ಮೇಲೆ ದುಷ್ಪರಿಣಾಮ: ಮೇಲ್ಮನವಿಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶಕ್ಕೆ ವಾಶಿಂಗ್ಟನ್‌ನ ಫೆಡರಲ್ ನ್ಯಾಯಾಧೀಶ ಜೇಮ್ಸ್ ರೋಬರ್ಟ್ ನೀಡಿರುವ ತಡೆಯಾಜ್ಞೆ ಸಾರ್ವಜನಿಕರ ಮೇಲೆ ತಕ್ಷಣದ ದುಷ್ಪರಿಣಾಮ ಬೀರುತ್ತದೆ ಎಂಬುದಾಗಿ ಸರಕಾರ ತನ್ನ ಮೇಲ್ಮನವಿಯಲ್ಲಿ ಹೇಳಿದೆ.
ಅದೇ ವೇಳೆ, ಈ ಆದೇಶವು ಸರಕಾರಿ ಆದೇಶವೊಂದರ ಜಾರಿಗೆ ಅಡಚಣೆ ಉಂಟುಮಾಡಿದೆ ಹಾಗೂ ವಿದೇಶೀಯರನ್ನು ಒಳಗೆ ಬಿಡುವ ಮೂಲಕ ಎದುರಾಗುವ ಅಪಾಯದ ಪ್ರಮಾಣದ ಬಗ್ಗೆ ಅಧ್ಯಕ್ಷರು ತೆಗೆದುಕೊಂಡಿರುವ ಕ್ರಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ಅದು ಹೇಳಿದೆ.
ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ನ್ಯಾಯಾಧೀಶರನ್ನು ಟೀಕಿಸಿ ಟ್ರಂಪ್ ಶನಿವಾರ ಟ್ವೀಟ್ ಮಾಡಿರುವುದನ್ನು ಸ್ಮರಿಸಬಹುದಾಗಿದೆ. ‘ತಥಾಕಥಿತ’ ನ್ಯಾಯಾಧೀಶರು ನೀಡಿರುವ ತೀರ್ಪು ಹಾಸ್ಯಾಸ್ಪದ ಎಂಬುದಾಗಿ ಅವರು ಹೇಳಿದ್ದಾರೆ.







