ಬರವಣಿಗೆ ಪ್ರೀತಿ ಬೆಳೆಸಬೇಕೆ ಹೊರತು ಧ್ವೇಷವಲ್ಲ: ಜ್ಯೋತಿ
ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ಸಮಾರೋಪ

ಬೆಳ್ಮಣ್, ಫೆ.5: ಕವಿಗಳ ಬರವಣಿಗೆ ಎಲ್ಲರಲ್ಲಿಯೂ ಪ್ರೀತಿ ವಿಶ್ವಾಸ ಸ್ನೇಹ ವನ್ನು ಹುಟ್ಟಿಸುವಂತಿರಬೇಕೆ ಹೊರತು ದ್ವೇಷಿಸುವಂತಿರಬಾರದು. ಕನ್ನಡ ನಾಡು ನುಡಿಯಲ್ಲಿ ಸಂಸ್ಕಾರ ಸಂಸ್ಕೃತಿ ಅಡಕವಾಗಿದೆ ಎಂದು ಕವಯತ್ರಿ ಹಾಗೂ ಲೇಖಕಿ ಜ್ಯೋತಿ ಗುರುಪ್ರಸಾದ್ ಹೇಳಿದ್ದಾರೆ.
ಬೆಳ್ಮಣ್ ಸಂತ ಜೋಸೆಫ್‌ರ ಶಾಲೆಯಲ್ಲಿ ವಂ.ಫಾನಿಕೋಲಸ್ ಕರ್ನಿರೋ ಸಭಾಂಗಣದ ಕೋಡಿಮಾರು ಗೋಪಾಲಕೃಷ್ಣ ತಂತ್ರಿ ವೇದಿಕೆಯಲ್ಲಿ ಶನಿವಾರ ನಡೆದ 13ನೆ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕನ್ನಡ ನಮ್ಮ ಜೀವಳವಾಗಬೇಕು. ನಮ್ಮ ಮಕ್ಕಳಲ್ಲಿ ಕನ್ನಡ ಭಾಷೆಯ ಅರಿವು ಮೂಡಿಸುವ ಮಹಾ ಕಾರ್ಯ ಹಿರಿಯರಿಂದಾಗಬೇಕಾಗಿದೆ. ಮಕ್ಕಳಿಗೆ ನಿಜ ವಾದ ಮಾತೃಭಾಷೆ ಕನ್ನಡವನ್ನು ಕಲಿಸುವಲ್ಲಿ ಹೆತ್ತವರ ಪಾತ್ರ ಬಹುಮುಖ್ಯ. ಯುವ ಜನಾಂಗಕ್ಕೆ ಕನ್ನಡ ಭಾಷೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದರು.
ಕಾರ್ಕಳದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, ಕನ್ನಡ ಭಾಷೆ ಸಂಸ್ಕೃತಿಗಾಗಿ ಹಾಗೂ ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ. ಕನ್ನಡ ಮಾಧ್ಯಮದಲ್ಲೆ ಕಲಿತವರು ಇವತ್ತು ಉನ್ನತ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಜಯಪ್ರಕಾಶ ಮಾವಿನಕುಳಿ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್, ತಾಪಂ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಹರಿದಾಸ ರಾವ್ ಶಿವಪುರ, ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೋ, ನಾರಾಯಣ ಮಡಿ, ಶೇಖರ ಅಜೆಕಾರು, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೂಸಿ ಪಿರೇರಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಕಮಲಿನಿ ಮೊದಲಾದವರು ಉಪಸ್ಥಿತರಿದ್ದರು.
ಸಾಧಕರಾದ ಡಾ.ಬಾಲಕೃಷ್ಣ ಆಳ್ವ(ವೈದ್ಯಕೀಯ), ಡಾ.ಪ್ರಕಾಶ್ ಶೆಣೈ (ಸಂಗೀತ), ಉರ್ಬನ್ ಡಿಸೋಜ ಬೆಳ್ಮಣ್(ಪ್ರಗತಿಪರ ಕೃಷಿಕ), ಶೋಭಾ ಆಚಾರ್ಯ(ಗುಡಿ ಕೈಗಾರಿಕೆ), ಶ್ರೀಕರ ಭಟ್ ಈದು(ಮಾಧ್ಯಮ), ವಿಶ್ವನಾಥ ಅಡ್ಯಂತಾಯ(ಯಕ್ಷಗಾನ), ಅನು ಬೆಳ್ಳೆ(ಸಾಹಿತ್ಯ), ಅಪ್ಪಿ ಮೊಲಿ (ಗ್ರಾಮೀಣ ಸೇವೆ), ವಾಸು ಮೂಲ್ಯ (ಕುಂಬಾ ರಿಕೆ), ರಾಮಯ್ಯ ಪ್ರಭು, ಮಂಜನಬೆಟ್ಟು ಮುಡಾರು(ನಾಟಿ ವೈದ್ಯ), ಬಿ.ಜಯಶೀಲ ಭಟ್(ಶಿಕ್ಷಣ) ಬೆಳ್ಮಣ್ ಸ್ಫೋರ್ಟ್ಸ್‌ಕ್ಲಬ್(ಸಂಘಟನೆ) ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನ ಕಾರ್ಯದರ್ಶಿ ಬಿ.ಪುಂಡಲೀಕ ಮರಾಠೆ ವಂದಿಸಿದರು. ಶರತ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು.







