ಎಟಿಎಂ ದಾಳಿಕೋರ ಪ್ರಕರಣ : ಮಧುಕರ್ ರೆಡ್ಡಿಗೆ 12 ದಿನ ನ್ಯಾಯಾಂಗ ಬಂಧನ

ಮದನಪಲ್ಲಿ/ಬೆಂಗಳೂರು, ಫೆ.5: ಹಣಕ್ಕಾಗಿ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿ ಮಧುಕರ್ ರೆಡ್ಡಿಗೆ 12 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ರವಿವಾರ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಪಿಲೇರುನಲ್ಲಿರುವ ಮದನಪಲ್ಲಿ ಕೋರ್ಟ್‌ನ ನ್ಯಾಯಮೂರ್ತಿ ಕವಿತಾ ಅವರ ನಿವಾಸಕ್ಕೆ ಆರೋಪಿ ಮಧುಕರ್ ರೆಡ್ಡಿಯನ್ನು ಪೊಲೀಸರು ಹಾಜರುಪಡಿಸಿದರು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಕೋರಿದ್ದ ಹಿನ್ನೆಲೆಯಲ್ಲಿ ಫೆ.17ವರೆಗೂ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾ.ಕವಿತಾ ಅವರು ಆದೇಶಿಸಿದರು.
3 ರಾಜ್ಯಗಳ ಪೈಪೋಟಿ: ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಧುಕರ್ ರೆಡ್ಡಿಯನ್ನು ವಶಕ್ಕೆ ಪಡೆಯಲು ಕರ್ನಾಟಕ, ಆಂಧ್ರ ಹಾಗೂ ಕೇರಳ ರಾಜ್ಯಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಮಧುಕರ್ ರೆಡ್ಡಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಆಂಧ್ರ ಪೊಲೀಸರು ಮನವಿ ಮಾಡಲಿದ್ದಾರೆ. ಆಂಧ್ರ ಬಳಿಕ ಕರ್ನಾಟಕ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಇದೇ ವೇಳೆ ಬೆಂಗಳೂರು ಪೊಲೀಸರು ತಾಂತ್ರಿಕ ವಿಚಾರಣೆ ಮುಗಿಸುವ ಸಾಧ್ಯತೆಯಿದೆ.
ರೆಡ್ಡಿ ಅಪರಾಧಗಳು:
ಆಂಧ್ರ: 2005ರ ಆನಂದ ರೆಡ್ಡಿ ಕೊಲೆ ಪ್ರಕರಣ ( ನೀರಿನ ವಿಚಾರಕ್ಕೆ ಸ್ಫೋಟಕ ಸಿಡಿಸಿ ಕೊಲೆ ಮಾಡಿದ್ದ), 2011ರಲ್ಲಿ ಕಡಪ ಜೈಲಿನಿಂದ ಪರಾರಿ, 2013ರ ನ.10 ಧರ್ಮಾವರಂ ಕೊಲೆ ಪ್ರಕರಣ ( ಪ್ರಮೀಳಮ್ಮ),
ಕರ್ನಾಟಕ: 2013ರ ನ.19ರಂದು ಎಟಿಎಂನಲ್ಲಿ ಜ್ಯೋತಿ ಉದಯ್ ಕೊಲೆ ಯತ್ನ, ಕೇರಳ: ಎರ್ನಾಕುಲಂನಲ್ಲಿ ನಡೆದ ಎರಡು ಸರ ಅಪಹರಣ ಪ್ರಕರಣ, ಎಟಿಎಂನಲ್ಲಿ ನಡೆದ ಕೊಲೆ ಯತ್ನ ಪ್ರಕರಣ.







