ಶಿರಿಯಾರ ಗ್ರಾಪಂ ದಲಿತ ಅಧ್ಯಕ್ಷೆಗೆ ನ್ಯಾಯ ಒದಗಿಸುವಂತೆ ಮನವಿ

ಉಡುಪಿ, ಫೆ.5: ಶಿರಿಯಾರ ಗ್ರಾಪಂ ಅಧ್ಯಕ್ಷೆ, ದಲಿತ ಮಹಿಳೆ ಜ್ಯೋತಿ ಅವರಿಗೆ ಪಂಚಾಯತ್ ಸದಸ್ಯರು ಮಾನಸಿಕ ಹಿಂಸೆ, ದೌರ್ಜನ್ಯ, ದಿಗ್ಬಂಧನ ಮಾಡಿ ಅಧ್ಯಕ್ಷರ ಹುದ್ದೆಯಿಂದ ಹೊರಗಿಡಲು ನಡೆಸಿರುವ ಹುನ್ನಾರದ ಬಗ್ಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿೆ ಶನಿವಾರ ಮನವಿ ಸಲ್ಲಿಸಲಾಯಿತು.
ಗ್ರಾಪಂನಲ್ಲಿ ನಡೆಸಲಾದ ಕಾಮಗಾರಿ, ಶೇ.25ರ ನಿಧಿ ಬಳಕೆ ಹಾಗೂ ಹಣದ ವ್ಯವಹಾರದ ಬಗ್ಗೆ ತನಿಖೆಯಾಗಬೇಕು. ಜ್ಯೋತಿ ಯವರಿಗೆ ಆಡಳಿತ ನಡೆಸಲು ಸೂಕ್ತ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ದಲಿತ ಮಹಿಳೆಗೆ ಅನ್ಯಾಯವಾದರೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಿಯೋಗ ಮನವಿಯಲ್ಲಿ ಎಚ್ಚರಿಕೆ ನೀಡಿದೆ.
ಮನವಿ ಸ್ವೀಕರಿಸಿದ ಸಿಇಒ ಮಾತನಾಡಿ, ಈ ಬಗ್ಗೆ ಸದಸ್ಯರುಗಳ ಜೊತೆ ಚರ್ಚಿಸುತ್ತೇನೆ. ಮನವಿಯಲ್ಲಿರುವ ಅಂಶಗಳನ್ನು ಪರಿಶೀಲಿಸಲಾಗುವುದು. ಮುಂದಿನ ಜಿಪಂ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಮನವಿಯ ಅಂಶಗಳನ್ನು ಸಭೆಯ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ದಸಂಸ ಮುಖಂಡರುಗಳಾದ ಸುಂದರ ಮಾಸ್ತರ್, ಶ್ಯಾಮ ರಾಜ ಬಿರ್ತಿ, ಸುಂದರ ಕಪ್ಪೆಟ್ಟು, ಪರಮೇಶ್ವರ ಉಪ್ಪೂರು, ನಾರಾಯಣ ಮಣೂರು, ವಾಸು ನೇಜಾರು, ಅಣ್ಣಪ್ಪಕೊಳಲಗಿರಿ, ಹುಸೇನ್ ಕೋಡಿ ಬೆಂಗ್ರೆ, ಪರ್ವೆಝ್, ಅಬ್ದುಲ್ ಅಜೀಜ್ ಉದ್ಯಾವರ, ವಿಠಲ ತೊಟ್ಟಂ, ಅನಂತ ಮಚ್ಚಟ್ಟು, ಶ್ಯಾಮ ಸುಂದರ್ ತೆಕ್ಕಟ್ಟೆ, ಅಧ್ಯಕ್ಷ ಜ್ಯೋತಿ ಮೊದಲಾದ ವರು ಉಪಸ್ಥಿತರಿದ್ದರು.







