ವೀರರಾಣಿ ಅಬ್ಬಕ್ಕ ಉತ್ಸವ : ಮಹಿಳಾ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

ಕೊಣಾಜೆ,ಫೆ.5: ಅಸೈಗೋಳಿಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವದ ಎರಡನೇ ದಿನವಾದ ಭಾನುವಾರ ಮಹಿಳಾ ವಿಚಾರಗೋಷ್ಠಿ, ಬಹುಭಾಷಾ ಕವಿಗೋಷ್ಠಿ,ಯಕ್ಷನೃತ್ಯ ರೂಪಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಸೈಗೋಳಿಯ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ಮಂಗಳೂರಿನ ವೈಷ್ಣವಿ ಕಿಣಿ ಮತ್ತು ಬಳಗದವರಿಂದ ವಂದನ ಕಾರ್ಯಕ್ರಮದಿಂದ ಉತ್ಸವದ ಎರಡನೇ ದಿನದ ಕಾರ್ಯಕ್ರಮ ಪ್ರಾರಂಭಗೊಂಡರೆ, ಕಾರ್ಯಕ್ರಮದಲ್ಲಿ ಹುಸೈನ್ ಕಾಟಿಪಳ್ಳ ಮತ್ತು ಬಳಗದವರಿಂದ ಭ್ಯಾರಿ ಭಾಷಾ ಕಾರ್ಯಕ್ರಮ ಪ್ರಶಂಸಾ ಕಾಪು ಅವರಿಂದ ಹಾಸ್ಯರಂಜನೆ, ಗೋಫಿನಾಥ್ ಭಟ್ ಮತ್ತು ಬಳಗದವರಿಂದ ಕೊಂಕಣಿ ಸಾಂಸ್ಕೃತಿಕ ವೈವಿಧ್ಯ, ಸನಾತನ ಯಕ್ಷಾಲಯ ಮಂಗಳೂರು ಇವರಿಂದ ‘ಕನಕ ಕೌಮುದಿ’ ಯಕ್ಷನೃತ್ಯ ರೂಪಕ, ರಂಗಚಲನ ಮಂಗಳೂರು ಇಲ್ಲಿನ ದಿನೇಶ್ ಅತ್ತಾವರ ಮತ್ತು ಬಳಗದವರಿಂದ ರಾಣಿ ಅಬ್ಬಕ್ಕ ರೂಪಕ, ಖಾಸಗಿ ವಾಹಿನಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಚಿತ್ರಾಲಿ ಮತ್ತು ಅಚಿಂತ್ಯ, ವಿದ್ಯಾ ಮುರಳೀದರ ಮತ್ತು ಬಳಗ ಸೌರಭ ಸಂಗೀತ ನೃತ್ಯಕಲಾ ಪರಿಷತ್‌ನಿಂದ ನೃತ್ಯಾರ್ಪಣಾ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ನಡೆದ ಮಹಿಳೆ ಮತ್ತು ಅಸಾಂಪ್ರದಾಯಿಕ ನೆಲೆಗಳು ವಿಚಾರದಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿಯಲ್ಲಿ ವಿಶ್ವವಿದ್ಯಾಲಯ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ವಿಭಾಗದ ಡಾ ಶೈಲಾ ಯು. ಲೋಕದೃಷ್ಠಿ ವಿಚಾರದಲ್ಲಿ ವಿಷಯ ಮಂಡಿಸಿದರೆ, ಅಭಿವೃದ್ಧಿ ದೃಷ್ಠಿಯ ವಿಚಾರದಲ್ಲಿ ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ವಿಷಯ ಮಂಡಿಸಿದರು. ವಿಚಾರಗೋಠಿಯ ಅಧ್ಯಕ್ಷತೆಯನ್ನು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ ಪ್ರೀತಿ ಶುಭಚಂದ್ರ ವಹಿಸಿದ್ದರು.
ಮಹಿಳೆ ಮತ್ತು ತಲ್ಲಣಗಳು ವಿಚಾರದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಸುಮಾ ವೆಂಕಟ್, ತಾರಾ ಭಟ್ ಕನ್ನಡ ಭಾಷೆಯಲ್ಲಿ , ಸ್ಮಿತಾ ಪ್ರಭು ಮಂಗಳೂರು, ಕೊಂಕಣಿಯಲ್ಲಿ, ವಿದ್ಯಾಶ್ರೀ ಎಸ್. ಶೆಟ್ಟಿ ಉಳ್ಳಾಲ ತುಳುವಿನಲ್ಲಿ, ಶಮೀಮಾ ಕುತ್ತಾರ್ ಬ್ಯಾರಿ ಭಾಷೆಯಲ್ಲಿ ಲೀಲಾ ದಾಮೋದರ್ ಅರೆಭಾಷೆಯಲ್ಲಿ ಕವನ ವಾಚಿಸಿದರು. ಕಾವ್ಯಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕಿ ಭಾಗೀರಥಿ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಅನುಪಮ ಸ್ವಾಗತಿಸಿದರು. ರತ್ನಾವತಿ ಜೆ. ಬೈಕಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ವಂದಿಸಿದರು.







