3,700 ಕೋ.ರೂ.ಗಳ ನೊಯ್ಡ ವಂಚನೆ : ಪಿಎಂಎಲ್‌ಎ ಪ್ರಕರಣ ದಾಖಲಿಸಿದ ಇಡಿ

ಹೊಸದಿಲ್ಲಿ,ಫೆ.5: ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಯುಆರ್‌ಎಲ್ ಲಿಂಕ್‌ಗಳ ಮೂಲಕ ‘ಲೈಕ್’ಗಳ ಸೋಗಿನಲ್ಲಿ ಅಮಾಯಕ ಹೂಡಿಕೆದಾರರಿಗೆ 3,700 ಕೋ.ರೂ.ಗಳನ್ನು ವಂಚಿಸಿರುವ ನೊಯ್ಡದ ಆನ್‌ಲೈನ್ ಕಂಪನಿಯ ವಿರುದ್ಧ ಹಣಚೆಲುವೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ರವಿವಾರ ಉತ್ತರ ಪ್ರದೇಶದ ವಿವಿಧ ನಗರಗಳಲ್ಲಿ ದಾಳಿಗಳನ್ನು ನಡೆಸಿ ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿತು.
ನೊಯ್ಡ,ಗಾಝಿಯಾಬಾದ್ ಮತ್ತು ಕಾನ್ಪುರಗಳಲ್ಲಿ ಕಂಪನಿಯ ಮಾಲಿಕರು ಮತ್ತು ಇತರರ ಕಚೇರಿಗಳು ಹಾಗೂ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಿದ ಅಧಿಕಾರಿಗಳು ಅರೋಪಿಗಳ ಹೆಸರಿನಲ್ಲಿರುವ ಕೋಟ್ಯಂತರ ರೂ.ವೌಲ್ಯದ ಆಸ್ತಿಗಳ ವಿವರಗಳಿರುವ ದಾಖಲೆಗಳನ್ನು ವಶಪಡಿಸಿಕೊಂಡರು.
ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ಪ್ರಮುಖ ಆರೋಪಿಗಳಾದ ಅನುಭವ ಮಿತ್ತಲ್, ಶ್ರೀಧರ್ ಮತ್ತು ಮಹೇಶ್ ಅವರನ್ನು ಫೆ.2ರಂದು ಬಂಧಿಸಿತ್ತು.
ತಾವು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಲೈಕ್‌ಗಳನ್ನು ಮಾಡಿದರೆ ಅಂತಹ ಪ್ರತಿ ಲೈಕ್‌ಗೆ ಐದು ರೂ. ನೀಡುವುದಾಗಿ ಆಮಿಷವೊಡ್ಡಿದ್ದ ನೊಯ್ಡಿದ ಅಬ್ಲೇಜ್ ಇನ್ಫೋ ಸೊಲುಷನ್ಸ್ ಗ್ರಾಹಕರಿಂದ ಸುಮಾರು ಏಳು ಲಕ್ಷ ಹೂಡಿಕೆದಾರರಿಂದ 3,700 ಕೋ.ರೂ.ಗಳ್ನು ಸಂಗ್ರಹಿಸಿ ಬಳಿಕ ಅವರಿಗೆ ಹಣವನ್ನು ನೀಡದೇ ವಂಚಿಸಿತ್ತು.







