ಬರ ಪೀಡಿತ ತಾಲೂಕಿನಲ್ಲಿ ಪೋಲಾಗುತ್ತಿದೆ ಕುಡಿಯುವ ನೀರು !
ಇಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ

ಬಂಟ್ವಾಳ, ಫೆ. 5: ಒಂದೆಡೆ ರಾಜ್ಯ ಸರಕಾರ ಬಂಟ್ವಾಳ ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಿಸಿದ್ದು ಮುಂದಿನ ದಿನಗಳಲ್ಲಿ ಬರ ನಿರ್ವಹಣೆಗಾಗಿ ತಾಲೂಕು ಆಡಳಿತ ಸಿದ್ಧತೆಗೆ ಮುಂದಾಗಿದೆ. ಇನ್ನೊಂದೆಡೆ ಸಿಬ್ಬಂದಿಯರ ನಿರ್ಲಕ್ಷ್ಯದಿಂದ ಬಂಟ್ವಾಳ ಪುರಸಭೆಯ ರೇಚಕ ಸ್ಥಾವರಗಳಿಂದ ಶುದ್ದೀಕರಿಸಿದ ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಹೊರ ಹರಿದು ಪೋಲಾಗುತ್ತಿದ್ದರೂ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದೆ.
ಪಾಣೆಮಂಗಳೂರಿನ ಗೂಡಿನಬಳಿಯಲ್ಲಿರುವ ಕುಡಿಯುವ ನೀರಿನ ರೇಚಕ ಸ್ಥಾವರದ ಸಿಬ್ಬಂದಿಯು ರವಿವಾರ ಸಂಜೆ ಪಂಪ್‌ನ ಸ್ವಿಚ್ ಆನ್ ಮಾಡಿ ಅದೆಲ್ಲಿಗೋ ತೆರಳಿದ್ದರು. ಸ್ಥಾವರ ತುಂಬಿದ್ದರೂ ಪಂಪ್‌ನ ಸ್ವಿಚ್ ಆಫ್ ಮಾಡಲು ಶೆಡ್‌ನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಶುದ್ದೀಕರಿಸಿದ ನೀರು ಸ್ಥಾವರದ ಸುತ್ತಲೂ ಧಾರಾಕಾರವಾಗಿ ಹೊರ ಹರಿದು ಪೋಲಾಗುತ್ತಿತ್ತು.
ಸಿಬ್ಬಂದಿಯು ಹೊರ ಹೋಗಿದ್ದರೂ ಸ್ಥಾವರದ ಶೆಡ್‌ನ ಬಾಗಿಲು ತೆರೆದಿತ್ತಲ್ಲದೆ ಫ್ಯಾನ್ ಕೂಡಾ ಆನ್ ಮಾಡಿಯೇ ಇತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿ ದಿನನಿತ್ಯವು ಇಲ್ಲಿ ಇದೇ ರೀತಿ ಸ್ಥಾವರದಿಂದ ನೀರು ಹರಿದು ಪೋಲಾಗುತ್ತಿರುತ್ತದೆ. ಹಗಲು ರಾತ್ರಿ ಪಾಲಿಯಲ್ಲಿ ಕೆಲಸ ಮಾಡಲು 4 ಮಂದಿ ಸಿಬ್ಬಂದಿಯಿದ್ದಾರೆ. ಅವರು ಮನಸ್ಸಾದಾಗ ಬಂದು ಹೋಗುತ್ತಾರೆ. ಪಂಪ್ ಸ್ವಿಚ್ ಆನ್ ಮಾಡಿ ಹೋದರೆ ನೀರು ತುಂಬಿ ಹೊರ ಹರಿದರೂ ಆಫ್ ಮಾಡಲು ಇಲ್ಲಿ ಯಾರೂ ಇರುವುದಿಲ್ಲ. ಹೊರ ಚೆಲ್ಲಲ್ಪಡುವ ಈ ಶುದ್ದೀಕರಿಸಿದ ನೀರು ಪಕ್ಕದ ತೋಟಕ್ಕೆ ನೀರುಣಿಸುತ್ತಿದೆ ಎಂದು ಸುದ್ದಿಗಾರರ ಗಮನಕ್ಕೆ ತಂದರು.
ಸುಮಾರು ಅರ್ಧ ತಾಸಿನ ಬಳಿಕ ಸೈಕಲ್ ತುಳಿಯುತ್ತಾ ಬಂದ ಸಿಬ್ಬಂದಿಯೊಬ್ಬರು ಸುದ್ದಿಗಾರರನ್ನು ಕಂಡು ತರಾತುರಿಯಲ್ಲಿ ಪಂಪ್‌ನ ಸ್ವಿಚ್ ಆಫ್ ಮಾಡಿದರು. ಕೆಲವೇ ಸಮಯದಲ್ಲಿ ಹೊರ ಹರಿಯುತ್ತಿದ್ದ ನೀರು ನಿಂತಿತು. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಬ್ಬಂದಿ ಬಿ.ಸಿ.ರೋಡ್ ಭಾಗಕ್ಕೆ ನೀರು ಪೂರೈಕೆಯ ಗೇಟ್‌ವಾಲ್ ತೆರೆಯಲೆಂದು ತೆರಳಿದ್ದೆ. ಹಾಗಾಗಿ ಸ್ವಲ್ಪ ನೀರು ಹೊರ ಹರಿದಿದೆ ಎಂದರಲ್ಲದೆ, ಒಂದು ಪಾಲಿಯಲ್ಲಿ ಇಬ್ಬರು ಸಿಬ್ಬಂದಿ ಇರಬೇಕಲ್ಲ. ಇನ್ನೊಬ್ಬರು ಎಲ್ಲಿದ್ದಾರೆ? ಎಂಬ ವರದಿಗಾರರ ಪ್ರಶ್ನೆಗೆ, ಇನ್ನು ಬರಬೇಕು ಎಂದು ಉತ್ತರಿಸಿ ಸಮರ್ಥಿಸಿಕೊಂಡರು.
ಬಂಟ್ವಾಳ ಪುರಸಭೆಯ ಜಕ್ರಿಬೆಟ್ಟಿನಲ್ಲಿರುವ ಪಂಪ್ ಹೌಸ್‌ನಲ್ಲಿ 6 ಇಂಚಿನ ಪೈಪ್‌ನ ಒಡೆದು ಮೂರ್ನಾಲ್ಕು ತಿಂಗಳಿನಿಂದ ಶುದ್ದೀಕರಿಸಿದ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದೆ. ಈ ಬಗ್ಗೆ ಹತ್ತು ಹಲವು ಬಾರಿ ಪುರಸಭೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ದುರಸ್ಥಿಗೊಳಿಸುವ ಕಾರ್ಯ ಮಾಡಿಲ್ಲ ಎಂದು ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.







