ಅನಾಥ ವೃದ್ಧೆ ನಿಧನ
ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಪಪಂ ಸಿಬ್ಬಂದಿ

ಮೂಡಿಗೆರೆ, ಫೆ.5: ಅನಾರೋಗ್ಯ ಪೀಡಿತರಾದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಬೀದಿಗಳಲ್ಲಿ ವಾಸ ಮಾಡುತ್ತಿದ್ದ ಸೀತಮ್ಮ (72) ನಿಧನರಾಗಿದ್ದಾರೆ.
ಆಕೆಗೆ ವಾರಸುದಾರರು ಇಲ್ಲದ ಕಾರಣ ಮೃತದೇಹವನ್ನು ಬೀಜುವಳ್ಳಿಯ ಸ್ಮಶಾನದಲ್ಲಿ ದಫನ ಕಾರ್ಯ ನಡೆಸಲಾಯಿತು. ಎಂಜಿಎಂ ಆಸ್ಪತ್ರೆಯ ಶವಾಗಾರದಲ್ಲಿ ಸಂಬಂಧಿಕರ ಬರುವಿಕೆಗಾಗಿ ಮೃತದೇಹವನ್ನು ಇಡಲಾಗಿತ್ತು.
ಆದರೆ ಆಕೆ ಅನಾಥೆಯಾದ್ದರಿಂದ ಸಂಬಂಧಿಕರ ಸುಳಿವು ಲಭ್ಯವಾಗಲಿಲ್ಲ. ಬಳಿಕ ಶನಿವಾರ ಸಂಜೆ ಪಪಂನ ಟ್ರಾಕ್ಟರ್‌ನಲ್ಲಿ ಕೊಂಡೊಯ್ದು ಬೀಜುವಳ್ಳಿ ಸ್ಮಶಾ
ದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪಾಲ್ಗೊಂಡಿದ್ದ ಜೀವರಕ್ಷಕ ಪ್ರಶಸ್ತಿ ಪುರಸ್ಕೃತ ಫಿಶ್ ಮೋಣು, ಡಿ.ವೈ. ಅಬ್ಬಾಸ್, ರಝಾಕ್ ಹಂಡುಗುಳಿ, ನಾಗರಾಜ್, ಸತೀಶ್ ಹಾಗೂ ಪಪಂ ಸಿಬ್ಬಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ನಗರದ ಬೀದಿಗಳಲ್ಲಿ ವಾಸ ಮಾಡುತ್ತಿದ್ದ ಅನಾಥ ವೃದ್ಧೆ ಸೀತಮ್ಮ (72) ಎರಡು ದಿನಗಳ ಹಿಂದೆ ತತ್ಕೊಳ ರಸ್ತೆಯ ಎಸ್.ಆರ್. ಕಾಂಪ್ಲೆಕ್ಸ್ ಬಳಿ ಅನಾರೋಗ್ಯದಿಂದ ಅಸ್ವಸ್ಥಗೊಂಡು ಬಿದ್ದಿರುವುದನ್ನು ಗಮನಿಸಿದ ಫಿಶ್ ಮೋಣು ಮತ್ತಿತರರು ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ಎಂಜಿಎಂ ಆಸ್ಪತ್ರೆಗೆ ಸೇರ್ಪಡೆಗೊಳಿಸಿ ಚಿಕಿತ್ಸೆ ಕೊಡಿಸಲು ಸಹಕರಿಸಿದ್ದರು. ಗುಣಮುಖವಾದರೆ ಆಕೆಯನ್ನು ಅನಾಥಾಶ್ರಮಕ್ಕೆ ಸೇರಿಸಲು ತೀರ್ಮಾನಿಸಿದ್ದರು. ಆದರೆ ಸೀತಮ್ಮ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.





