ಗರ್ಭಪಾತಕ್ಕೆ ಮಹಿಳೆಯ ಕೋರಿಕೆ ಪರಿಶೀಲಿಸಲು ವೈದ್ಯರ ಮಂಡಳಿ ರಚಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.6: ತನ್ನ ಗರ್ಭದಲ್ಲಿರುವ 21 ವಾರ ಪ್ರಾಯದ ಭ್ರೂಣಕ್ಕೆ ಮೂತ್ರಪಿಂಡಗಳಿಲ್ಲ ಮತ್ತು ಇನ್ನೂ ಹಲವು ದೋಷಗಳಿವೆ, ಹೀಗಾಗಿ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಯನ್ನು ನೀಡಬೇಕು ಎಂದು ಕೋರಿ 21ವರ್ಷದ ಮಹಿಳೆಯೋರ್ವಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಗರ್ಭಪಾತಕ್ಕೆ ಅನುಮತಿ ನೀಡಿಕೆಯನ್ನು ಪರಿಶೀಲಿಸಲು ಮುಂಬೈನ ಕೆಇಎಂ ಆಸ್ಪತ್ರೆಯ ಏಳು ತಜ್ಞವೈದ್ಯರ ಸಮಿತಿಯೊಂದನ್ನು ರಚಿಸಿರುವ ನ್ಯಾಯಾಲಯವು, ಮಹಿಳೆಯನ್ನು ತಪಾಸಣೆಗೊಳಪಡಿಸಿ ತನಗೆ ವರದಿಯನ್ನು ಸಲ್ಲಿಸುವಂತೆ ಅದಕ್ಕೆ ನಿರ್ದೇಶ ನೀಡಿದೆ.
ಈ ಮಧ್ಯಾಂತರ ದೇಶವನ್ನು ನೀಡಿದ ನ್ಯಾಯಮೂರ್ತಿಗಳಾದ ಎಸ್‌ಎ.ಬೊಬ್ಡೆ ಮತ್ತು ಎಲ್.ಎನ್.ರಾವ್ ಅವರ ಪೀಠವು, ಅರ್ಜಿಯ ವಿಚಾರಣೆಯನ್ನು ಫೆ.7ಕ್ಕೆ ನಿಗದಿಗೊಳಿಸಿತು.
20 ವಾರಗಳ ಗರ್ಭಾವಸ್ಥೆಯ ಬಳಿಕ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯವಿದ್ದರೂ ಗರ್ಭಪಾತ ಮಾಡಿಸಲು ಭಾರತೀಯ ಕಾನೂನಿನಲ್ಲಿ ಅವಕಾಶವಿಲ್ಲ. ಭ್ರೂಣದಲ್ಲಿ ಮೂತ್ರಪಿಂಡಗಳು ರೂಪುಗೊಂಡಿಲ್ಲ ಎನ್ನುವುದು ತನ್ನ ಗರ್ಭಾವಸ್ಥೆಯ 21ನೇ ವಾರದಲ್ಲಿ ಗೊತ್ತಾಗಿದೆ. ಇದನ್ನು ದೃಢಪಡಿಸಲು ಎರಡು ಬಾರಿ ತಾನು ಸ್ಕಾನಿಂಗ್ ಮಾಡಿಸಿಕೊಂಡಿದ್ದೇನೆ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾಳೆ.







