ಮೆಸ್ಸಿಯಿಂದ ಮತ್ತೊಂದು ದಾಖಲೆ, ಬಾರ್ಸಿಲೋನಕ್ಕೆ ಭರ್ಜರಿ ಜಯ

ಬಾರ್ಸಿಲೋನ, ಫೆ.5: ಲಾ ಲಿಗ ಚಾಂಪಿಯನ್ ಬಾರ್ಸಿಲೋನ ತಂಡ ಅಟ್ಲೆಟಿಕ್ ಬಿಲ್ಬಾವೊ ತಂಡವನ್ನು 3-0 ಅಂತರದಿಂದ ಮಣಿಸಿದ್ದು, ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ತನ್ನ ಕ್ಲಬ್‌ನ ಪರ ಫ್ರೀ-ಕಿಕ್‌ನ ಮೂಲಕ ಸರ್ವಾಧಿಕ ಗೋಲು ಬಾರಿಸಿ ದಾಖಲೆ ನಿರ್ಮಿಸಿದರು.
ಕಳೆದ ವರ್ಷ ವೆಲೆನ್ಸಿಯಾ ತಂಡದಿಂದ ಬಾರ್ಸಿಲೋನ ತಂಡವನ್ನು ಸೇರ್ಪಡೆಗೊಂಡಿದ್ದ ಪಾಕೊ ಅಲಕ್ಯಾಸೆರ್ 18ನೆ ನಿಮಿಷದಲ್ಲಿ ನೇಮರ್ ನೀಡಿದ ಪಾಸ್‌ನ ನೆರವಿನಿಂದ ಮೊದಲ ಲೀಗ್ ಗೋಲು ಬಾರಿಸಿದರು. ಬಾರ್ಸಿಲೋನಕ್ಕೆ 1-0 ಮುನ್ನಡೆ ಒದಗಿಸಿದರು.
40ನೆ ನಿಮಿಷದಲ್ಲಿ ಬಾರ್ಸಿಲೋನಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟ ಮೆಸ್ಸಿ ಫ್ರೀ-ಕಿಕ್‌ನಲ್ಲಿ ಬಾರ್ಸಿಲೋನ ಕ್ಲಬ್‌ನ ಪರ 27ನೆ ಗೋಲು ಬಾರಿಸಿ ಹೊಸ ದಾಖಲೆ ನಿರ್ಮಿಸಿದರು.
ಅಲೆಕ್ಸಿ ವಿಡಾಲ್ 67ನೆ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಬಾರ್ಸಿಲೋನಕ್ಕೆ 3-0 ಗೋಲುಗಳ ಅಂತರದ ಗೆಲುವು ತಂದರು.
ಬಾರ್ಸಿಲೋನದ ಕೋಚ್ ಲೂಯಿಸ್ ಎನ್ರಿಕ್ ಕಳೆದ ಬುಧವಾರ ಕಿಂಗ್ಸ್ ಕಪ್ ಸೆಮಿಫೈನಲ್‌ನಲ್ಲಿ ಆಡಿದ್ದ ತಂಡದಲ್ಲಿ ಆರು ಬದಲಾವಣೆ ಮಾಡಿದ್ದು, ತಂಡದ ಟಾಪ್ ಸ್ಕೋರರ್ ಲೂಯಿಸ್ ಸುಯರೆಝ್‌ಗೆ ವಿಶ್ರಾಂತಿ ನೀಡಿದ್ದರು. ಈ ಗೆಲುವಿನ ಮೂಲಕ ಬಾರ್ಸಿಲೋನ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನವನ್ನು ಉಳಿಸಿಕೊಂಡಿದೆ. ರಿಯಲ್ ಮ್ಯಾಡ್ರಿಡ್‌ಗಿಂತ ಒಂದು ಅಂಕ ಹಿಂದಿದೆ. ಸೆವಿಲ್ಲಾ ತಂಡ ಮೂರನೆ ಸ್ಥಾನದಲ್ಲಿದೆ.







