ಡೇವಿಸ್‌ಕಪ್: ನ್ಯೂಝಿಲೆಂಡ್ ವಿರುದ್ಧ ಭಾರತ ಜಯಭೇರಿ
ಆತಿಥೇಯರಿಗೆ ಗೆಲುವು ತಂದ ರಾಮ್‌ಕುಮಾರ್

ಪುಣೆ, ಫೆ.5: ನ್ಯೂಝಿಲೆಂಡ್‌ನ ಫಿನ್ ಟಿಯರ್ನಿ ಅವರನ್ನು ಮೂರು ಸೆಟ್‌ಗಳ ಅಂತರದಿಂದ ಮಣಿಸಿದ ರಾಮ್‌ಕುಮಾರ್ ರಾಮನಾಥನ್ ಭಾರತ ತಂಡ ಡೇವಿಸ್‌ಕಪ್‌ನ ಗ್ರೂಪ್ 1 ಏಷ್ಯಾ-ಒಶಿಯಾನಿಯ ಮೊದಲ ಸುತ್ತಿನ ಪಂದ್ಯವನ್ನು 3-1 ಅಂತರದಿಂದ ಗೆಲುವು ಸಾಧಿಸಲು ಮಹತ್ವದ ಪಾತ್ರವಹಿಸಿದ್ದಾರೆ.
ಇಲ್ಲಿನ ಬಾಲೆವಾಡಿಯ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ರವಿವಾರ ನಡೆದ ನಿರ್ಣಾಯಕ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ಅವರು ಕಿವೀಸ್ ಆಟಗಾರನನ್ನು 7-5, 6-1, 6-0 ಸೆಟ್‌ಗಳ ಅಂತರದಿಂದ ಮಣಿಸಿದರು.
ರಾಮ್‌ಕುಮಾರ್ ಶುಕ್ರವಾರ ನಡೆದ ಮೊದಲ ದಿನದ ಸಿಂಗಲ್ಸ್ ಪಂದ್ಯದಲ್ಲಿ ಜೋಸ್ ಸ್ಟಾಥಮ್ ವಿರುದ್ಧ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು. ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಜಯ ಸಾಧಿಸಿದ್ದ ಯೂಕಿ ಭಾಂಬ್ರಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದರು. ನ್ಯೂಝಿಲೆಂಡ್‌ನ ಅರ್ಟೆಮ್ ಸಿಟಾಕ್ ಹಾಗೂ ಮೈಕಲ್ ವೀನಸ್ ಅವರು ಭಾರತದ ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ಹಾಗೂ ವಿಷ್ಣು ವರ್ಧನ್‌ರನ್ನು ಮಣಿಸಿ ಡಬಲ್ಸ್ ಪಂದ್ಯವನ್ನು ಗೆದ್ದುಕೊಂಡಿದ್ದರು.
ಕಿವೀಸ್ ಡಬಲ್ಸ್ ಪಂದ್ಯವನ್ನು ಗೆದ್ದುಕೊಂಡ ಹಿನ್ನೆಲೆಯಲ್ಲಿ ಭಾರತಕ್ಕೆ ಡೇವಿಸ್‌ಕಪ್‌ನ ಮೊದಲ ಸುತ್ತಿನ ಪಂದ್ಯ ಜಯಿಸಲು ಇಂದಿನ ಪಂದ್ಯವನ್ನು ಗೆಲ್ಲಲ್ಲೇಬೇಕಾಗಿತ್ತು. ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯನ್ನು ಈಡೇರಿಸಿದ ರಾಮ್‌ಕುಮಾರ್ 3-1 ಅಂತರದಿಂದ ಪಂದ್ಯ ಗೆಲ್ಲಲು ನೆರವಾದರು.
22ರ ಪ್ರಾಯದ ಚೆನ್ನೈನ ಆಟಗಾರ ರಾಮ್ ಮೂರನೆ ಸೆಟ್‌ನಲ್ಲಿ 3 ಡಬಲ್ ಫಾಲ್ಟ್ ಸಹಿತ ಐದು ಬಾರಿ ತಪ್ಪೆಸಗಿದರೂ ಬ್ರೇಕ್ ಪಾಯಿಂಟ್ ಉಳಿಸಿಕೊಳ್ಳಲು ಯಶಸ್ವಿಯಾದರು.
ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 276ನೆ ರ್ಯಾಂಕಿನ ಆಟಗಾರ ರಾಮ್ ಎದುರಾಳಿ ಆಟಗಾರನಿಂದ ಮೊದಲ ಸೆಟ್‌ನಲ್ಲಿ ಪೈಪೋಟಿ ಎದುರಿಸಿದರೂ 7-5 ಅಂತರದಿಂದ ಜಯ ಸಾಧಿಸಿದರು. ಎದುರಾಳಿ ಆಟಗಾರನ ಮೇಲೆ ಪ್ರಾಬಲ್ಯ ಸಾಧಿಸಿ, ತಪ್ಪುಗಳನ್ನು ಕಡಿಮೆ ಮಾಡಿದ ರಾಮ್ ಎರಡು ಹಾಗೂ ಮೂರನೆ ಸೆಟ್‌ನ್ನು ಕ್ರಮವಾಗಿ 6-1 ಹಾಗೂ 6-0 ಅಂತರದಿಂದ ಸುಲಭವಾಗಿ ಗೆದ್ದುಕೊಂಡು ಪ್ರಾಬಲ್ಯ ಮೆರೆದರು.
ಭಾರತ ಎಪ್ರಿಲ್ 7 ರಿಂದ 9ರ ತನಕ ನಡೆಯಲಿರುವ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ಗೆ ಅರ್ಹತಾ ಪಂದ್ಯವಾಗಿದೆ.







