ಅಕ್ಬರ್‌ಗೆ ಸೋಲುಣಿಸಿದ್ದ ಮಹಾರಾಣಾ ಪ್ರತಾಪ್...!
ರಾಜಸ್ಥಾನದ ವಿವಿ ಪುಸ್ತಕದಲ್ಲಿ ಚರಿತ್ರೆಗೆ ತಿದ್ದುಪಡಿ?
ಜೈಪುರ, ಫೆ.5: ಹಲ್ದೀಘಾಟ್ ಕದನ ಎಂದೇ ಚರಿತ್ರೆಯಲ್ಲಿ ದಾಖಲಾಗಿರುವ, 1576ರಲ್ಲಿ ಅಕ್ಬರ್ ಹಾಗೂ ಮಹಾರಾಣಾ ಪ್ರತಾಪ್ ಮಧ್ಯೆ ನಡೆದ ಕದನದಲ್ಲಿ ಅಕ್ಬರ್ ಗೆದ್ದಿದ್ದ ಎಂಬುದು ಇತಿಹಾಸಕಾರರ ಅಭಿಮತ.
ಆದರೆ ಇದನ್ನು ತಿದ್ದುಪಡಿ ಮಾಡಿ, ಮಹಾರಾಣಾ ಪ್ರತಾಪ್ ಈ ಯುದ್ಧದಲ್ಲಿ ಗೆಲುವು ಸಾಧಿಸಿದ್ದ ಎಂದು ಪಠ್ಯಪುಸ್ತಕದಲ್ಲಿ ಬರೆಯುವಂತೆ ಜೈಪುರದ ಕಿಷನ್‌ಪೋಲ್ ಕ್ಷೇತ್ರದ ಬಿಜೆಪಿ ಶಾಸಕ ಮೋಹನ್‌ಲಾಲ್ ಗುಪ್ತಾ ಸಲಹೆ ಮಾಡಿದ್ದಾರೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ನಾಮನಿರ್ದೇಶಿತ ಸದಸ್ಯರೂ ಆಗಿರುವ ಗುಪ್ತಾ , ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ರಾಷ್ಟ್ರೀಯತೆ ವಿಷಯದ ಕುರಿತಾದ ಪಠ್ಯ ಸೇರಿದಂತೆ ನಾಲ್ಕು ಪಠ್ಯಗಳನ್ನು ಪುಸ್ತಕದಲ್ಲಿ ಸೇರಿಸುವಂತೆ ಸಲಹೆ ಮಾಡಿದ್ದಾರೆ. ನೈಜ ಇತಿಹಾಸವನ್ನು ಜನರಿಗೆ ತಲುಪಿಸುವ ಕಾಲ ಬಂದಿದೆ ಎಂದು ಅವರು ರಾಜಸ್ಥಾನ ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಜಿ.ಶರ್ಮ ಅವರಿಗೆ ಸಲಹೆ ಮಾಡಿದ್ದಾರೆ. ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿರುವ ಶರ್ಮ ಪ್ರಕಾರ, ಮಹಾರಾಣಾ ಮತ್ತು ಅಕ್ಬರ್ ನಡುವಿನ ಯುದ್ಧ ‘ಡ್ರಾ’ ಆಗಿತ್ತು..! ರಾಜಸ್ಥಾನ ವಿವಿಯ ಉಪಕುಲಪತಿ ರಾಜೇಶ್ವರ್ ಸಿಂಗ್ ಅವರು ಈ ಪ್ರಸ್ತಾವನೆಯನ್ನು ಪರಿಶೀಲನೆಗಾಗಿ ಇತಿಹಾಸ ಮಂಡಳಿಗೆ ಕಳುಹಿಸಿಕೊಟ್ಟಿದ್ದಾರೆ. ಶಾಸಕರ ಪ್ರಸ್ತಾವನೆಯನ್ನು ಮಂಡಳಿ ಪರಿಶೀಲಿಸಿ, ಮಂಜೂರಾತಿಗಾಗಿ ಶೈಕ್ಷಣಿಕ ಸಮಿತಿಗೆ ಕಳುಹಿಸಲಿದೆ ಎಂದವರು ತಿಳಿಸಿದ್ದಾರೆ. ಬಿಜೆಪಿ ಸರಕಾರವು ಈಗಾಗಲೇ ಶಾಲೆಯ ಪಠ್ಯ ಪುಸ್ತಕದಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿದೆ. ಕಳೆದ ವರ್ಷ ಪಠ್ಯದಲ್ಲಿ ಅಕ್ಬರ್ ಹೆಸರಿನ ಮುಂದಿದ್ದ ‘ಗ್ರೇಟ್’ ವಿಶೇಷಣವನ್ನು ತೆಗೆದುಹಾಕಿತ್ತು. ಅಲ್ಲದೆ ಮುಸ್ಲಿಂ ದೊರೆಗಳ ಕುರಿತಾದ ಪಾಠಗಳಲ್ಲಿದ್ದ ಕೆಲ ಅಂಶಗಳನ್ನು ಕಡಿತಗೊಳಿಸಿ, ಪ್ರಮಾಣವನ್ನು ಕಿರಿದಾಗಿಸಿತ್ತು.





