ರಫೇಲ್ ಒಪ್ಪಂದದ ವಿವರ ಬಹಿರಂಗ ಅಸಾಧ್ಯ: ವಾಯು ಪಡೆ
ಹೊಸದಿಲ್ಲಿ, ಫೆ.5: ಗೌಪ್ಯತೆ ಕಾಯ್ದುಕೊಳ್ಳ ಬೇಕಿರುವುದರಿಂದ ಭಾರತ ಮತ್ತು ಫ್ರಾನ್ಸ್ ನಡುವೆ ಸಹಿ ಹಾಕಲ್ಪಟ್ಟಿರುವ ರಫೇಲ್ ವಿಮಾನದ ಪೂರೈಕೆ ಕುರಿತ ಒಪ್ಪಂದದ ವಿವರವನ್ನು ಬಹಿರಂಗಗೊಳಿಸಲಾಗದು ಎಂದು ವಾಯುಪಡೆ ತಿಳಿಸಿದೆ.
ಭಾರತ ಮತ್ತು ಫ್ರಾನ್ಸ್ ಸರಕಾರದ ಮಧ್ಯೆ 2016ರ ಸೆ.23ರಂದು ರಫೇಲ್ ವಿಮಾನದ ಪೂರೈಕೆ ಮಾಡುವ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದ ಮಾಹಿತಿ ಬಹಿರಂಗಗೊಳಿಸಬೇಕೆಂದು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ವಿಶ್ವಾಸಾರ್ಹತೆಯ ನೆಲೆಯಲ್ಲಿ ಈ ಒಪ್ಪಂದದ ವಿವರವನ್ನು ಬಹಿರಂಗಗೊಳಿಸ ಲಾಗದು ಎಂದು ವಾಯುಪಡೆ ಮೂಲ ಗಳು ತಿಳಿಸಿವೆ. ಈ ಮಾಹಿತಿಗಳನ್ನು ರಹಸ್ಯವಾಗಿಡುವ ಅಗತ್ಯವಿದೆ. ಈ ವಿವರ ಬಹಿರಂಗಗೊಂಡರೆ ಈ ಮಾಹಿತಿ ನಮ್ಮ ವಿರೋಧಿಗಳಿಗೆ ಲಭ್ಯವಾಗುವ ಅಪಾಯವಿದೆ. ಅಲ್ಲದೆ ಈ ವಿಷಯ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲ ಎಂದು ವಾಯುಪಡೆ ತಿಳಿಸಿದೆ. ರಫೇಲ್ ಒಪ್ಪಂದದ ಮೊತ್ತ ಸೇರಿದಂತೆ ವಿವರ ಸಲ್ಲಿಸಬೇಕೆಂದು ರಕ್ಷಣಾ ಇಲಾಖೆಗೆ ಪಿಟಿಐ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿತ್ತು. ರಕ್ಷಣಾ ಇಲಾಖೆ ಈ ಅರ್ಜಿಯನ್ನು ವಾಯುಪಡೆಗೆ ಕಳಿಸಿತ್ತು. 36 ರಫೇಲ್ ವಿಮಾನ, ಶಸ್ತ್ರಾಸ್ತ್ರಗಳು ಮತ್ತು ಸಂಬಂಧಿತ ಸಲಕರಣೆಗಳನ್ನು ಭಾರತಕ್ಕೆ ಪೂರೈಸುವ ಈ ಒಪ್ಪಂದ 2019ರ ಸೆಪ್ಟಂಬರ್‌ನಿಂದ ಕಾರ್ಯಗತಗೊಳ್ಳಬೇಕಿದೆ.





